ವಿಜಯಪುರ: ನಗರದ ಹೆಸರಾಂತ ವೈದ್ಯರೊಬ್ಬರು ಆನ್ಲೈನ್ನಲ್ಲಿ 54 ಲಕ್ಷ ವಂಚನೆಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ವಾಸುದೇವ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ನ ಡಾ. ಅನಿರುದ್ಧ ರಾಘವೇಂದ್ರ ಉಮರ್ಜಿ (54) ವಂಚನೆಗೀಡಾದ ವೈದ್ಯರು. ತಮ್ಮ ಪಾಡಿಗೆ ತಾವು ರೋಗಿಗಳ ಸೇವೆ ಮಾಡುತ್ತಿದ್ದ ಈ ವೈದ್ಯರಿಗೆ ಫೆಡೆಕ್ಸ್ ಕೋರಿಯರ್ ವ್ಯವಸ್ಥಾಪಕನೆಂದು ಕರೆ ಮಾಡುತ್ತಾನೆ. ನೀವು ಫೆಡೆಕ್ಸ್ ಕೋರಿಯರ್ ಮೂಲಕ ಕಾಬೂಲ್ನಲ್ಲಿರುವ ಅಬ್ದುಲ್ರೆಹಮಾನ್ಗೆ ಅಕ್ರಮ ಡ್ರಗ್ಸ್ ಕೋರಿಯರ್ ಮಾಡಿದ್ದೀರಿ. ಅದರಲ್ಲಿ ಅಂತಾರಾಷ್ಟ್ರೀಯ ಸಿಮ್ಗಳು, 950 ಗ್ರಾಂ ಎಂಡಿಎಂಎ ಹಾಗೂ ಇತರೇ ವಸ್ತುಗಳನ್ನು ಕಳಿಸಿದ್ದೀರಿ ಎಂದು ಮುಂಬಯಿ ನ್ಯಾರೋಟಿಕ್ಸ್ ಕ್ರೈಂ ಬ್ರ್ಯಾಂಚ್ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾನೆ. ಈ ಪ್ರಕರಣದಿಂದ ನೀವು ಮುಕ್ತರಾಗಬೇಕಾದರೆ ನಿಮ್ಮ ಠೇವಣಿ ಖಾತೆಯಲ್ಲಿರುವ ಹಣವನ್ನು ಎಸ್ಬಿ ಖಾತೆಗೆ ವರ್ಗಾವಣೆ ಮಾಡಿಕೊಂಡು, 54 ಲಕ್ಷ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಗೆ (ನಂಬರ್ ಕೊಟ್ಟಿದ್ದಾನೆ) ವರ್ಗಾವಣೆ ಮಾಡಬೇಕೆಂದು ಹೇಳಿದ್ದಲ್ಲದೇ, ನಿಮ್ಮ ವಿಚಾರಣೆ ಮುಗಿದ ಅರ್ಧ ಗಂಟೆಯಲ್ಲಿ ನಿಮ್ಮ ಹಣ ಮರಳಿಸುವುದಾಗಿ ತಿಳಿಸಿ, ಫೆಡೆಕ್ಸ್ ಮತ್ತು ಮುಂಬಯಿ ನ್ಯಾರೋಟಿಕ್ಸ್ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಆನ್ಲೈನ್ ವಂಚನೆ ಮಾಡಿದ್ದಾನೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದುಕೊಂಡು ದೂರು ನೀಡಲು ತಡವಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಂಚನೆಗೀಡಾದ ನೊಂದ ವೈದ್ಯ ಡಾ. ಅನಿರುದ್ಧ ಉಮರ್ಜಿ ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.