ವಿಜಯಪುರ: ಕೇಂದ್ರ ಸರ್ಕಾರವು ಬೆಂಬಲ ಬೆಲೆ ಘೋಷಿಸಿರುವ ಎಫ್.ಎ.ಕ್ಯೂ. ಗುಣಮಟ್ಟದ ಕುಸುಬೆ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 5,650 ರೂ. ದರಂತೆ ಖರೀದಿಸಲು ವಿಜಯಪುರ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ನಿರ್ಧರಿಸಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ 383 ಹೆಕ್ಟೇರ್ ಕ್ಷೇತ್ರದಲ್ಲಿ ಕುಸುಬೆ ಬಿತ್ತನೆಯಾಗಿದ್ದು, ಅಂದಾಜು 3,064 ಕ್ವಿಂಟಲ್ ಇಳುವರಿ ಬರಬಹುದೆಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಕ್ವಿಂಟಲ್ಗೆ 4,400 ರೂ. ರಿಂದ 4,650 ವರೆಗೆ ಮಾರಾಟವಾಗುತ್ತಿದ್ದು, ಕೆ.ಓ.ಎಫ್. ಸಂಸ್ಥೆಯ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳನ್ನು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳೆಂದು ಪರಿಗಣಿಸಿ, ರೈತರ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜಿಲ್ಲೆಯಲ್ಲಿ ಬಬಲೇಶ್ವರ, ಸವನಹಳ್ಳಿ, ಬೆಳ್ಳುಬ್ಬಿ, ತಂಗಡಗಿ, ಚಡಚಣ, ಹಲಸಂಗಿ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕುಸುಬೆಯನ್ನು ಖರೀದಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.