ವಿಜಯಪುರ: ಮಕ್ಕಳನ್ನು ಅಕ್ರಮ ಸಾಗಾಣಿಕೆ ಮಾಡಿಕೊಂಡು ಬೇರೆಡೆ ಅನಧಿಕೃತವಾಗಿ ಮಕ್ಕಳನ್ನಿಟ್ಟು ಸಾಕಣೆ ಮಾಡುತ್ತಿದ್ದ ಮಹಿಳೆ ವಿರುದ್ಧ ಇಲ್ಲಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಅಥಣಿ ಗಲ್ಲಿ ನಿವಾಸಿ ಜಯಮಾಲಾ ಬಿಜಾಪುರ ಮಕ್ಕಳನ್ನು ಅಕ್ರಮವಾಗಿ ಸಾಕಣೆ ಮಾಡುತ್ತಿದ್ದ ಮಹಿಳೆ.
ಈಕೆ ಕಳೆದ 3 ವರ್ಷದಿಂದ ಅನಧಿಕೃತವಾಗಿ ಮಕ್ಕಳನ್ನು ಬೇರೆಡೆಯಿಂದ ಕರೆತಂದು ತಮ್ಮ ಪರಿಚಯದವರಿಗೆ ಕೊಟ್ಟಿರುತ್ತಾರೆ ಎಂಬ ಮಾಹಿತಿ ಮೇರೆಗೆ ದೂರು ಸಲ್ಲಿಸಿದ ಸುನಂದಾ ತೋಳಬಂದಿ ಜಯಮಾಲಾಮನೆಗೆ ತೆರಳಿ ವಿಚಾರಿಸಿದಾಗ, ಆರೋಪಿ ಮಹಿಳೆ ಮನೆಯಲ್ಲಿರಲಿಲ್ಲ.
ಮಗುವಿನೊಂದಿಗೆ ಇದ್ದ ಶಾಂತಮ್ಮ ರಾಜು ಹೆರಕಲ್ ಅವರಿಗೆ ವಿಚಾರಿಸಿದಾಗ, ಅವರು ತಿಂಗಳಿಗೆ 3,000/-ರೂ. ಪಡೆದುಕೊಂಡು 3 ವರ್ಷದಿಂದ ಮಗುವನ್ನು ಸಾಕುತ್ತಿರುವುದಾಗಿ ತಿಳಿಸಿದಳು. ಈ ಕುರಿತು ಓಣಿಯಲ್ಲಿವಿಚಾರಿಸಿದಾಗ ಜಯಮಾಲಾ ಬಿಜಾಪೂರ 11 ತಿಂಗಳದ ಇನ್ನೊಂದು ಹೆಣ್ಣು ಮಗುವನ್ನು ದರಬಾರ ಗಲ್ಲಿಯಲ್ಲಿರುವ ಚಂದ್ರಮ್ಮ ಬಸಪ್ಪ ಮಾದರ ಇವರ ಮನೆಯಲ್ಲಿ ಸಾಕಲು ಬಿಟ್ಟಿದ್ದಾಳೆ ಎಂಬ ಮಾಹಿತಿ ತಿಳಿಯಿತು. ಕೂಡಲೆ ಚೈಲ್ಡ್ ಲೈನ್ ಸಿಬ್ಬಂದಿಯೊಟ್ಟಿಗೆ ಅಲ್ಲಿಗೆ ತೆರಳಿ ಚಂದ್ರಮ್ಮ ಮಾದರ ಅವಳನ್ನು ವಿಚಾರಿಸಿದಾಗ, ಆರೋಪಿ ಜಯಮಾಲಾ, ತಂದೆ, ತಾಯಿ ಇಲ್ಲದ ಮಕ್ಕಳನ್ನು ವಿಜಯಪುರಕ್ಕೆಕರೆ ತಂದಿದ್ದಾರೆ ಎಂದು ತಿಳಿಸಿದಾಗ ಎರಡೂ ಮಕ್ಕಳನ್ನು ರಕ್ಷಣೆ ಮಾಡಿ ಸಿದ್ದೇಶ್ವರ ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾಗಿ ಚೈಲ್ಡ್ ಲೈನ್ ಸಂಯೋಜಕಿ ಸುನಂದಾ ತೋಳಬಂದಿ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.