ವಿಜಯಪುರ: ಸೈಕಲ್ ಎನ್ನುವುದು ಕೇವಲ ದೈಹಿಕ ವ್ಯಾಯಾಮದ ಸಾಧನವಲ್ಲ. ಅದು ಪ್ರಕೃತಿಯ ಸಂಕೇತ. ಸೈಕಲ್ ಬಳಸುವುದು ಎಂದರೆ, ನಾವು ಪ್ರಕೃತಿಯೊಂದಿಗೆ ಜೀವಿಸುತ್ತೇವೆ. ಮತ್ತು ಪ್ರಕೃತಿಯನ್ನು ಆದರಿಸುತ್ತೇವೆ ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.
ಇಶಾ ಫೌಂಡೇಶನ್ ಸಹಯೋಗದಲ್ಲಿ ಮಣ್ಣು ಉಳಿಸಿ ದಿನ ನಿಮಿತ್ತ ಏರ್ಪಡಿಸಿದ ಸೈಕಲ್ ಜಾಥಾ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಳಿ, ಬೆಳಕು, ನೀರು, ಬೆಂಕಿ, ಭೂಮಿ ಪಂಚಮಹಾಭೂತಗಳಿಂದ ನಿರ್ಮಾಣಗೊಂಡ ಈ ಪ್ರಕೃತಿ ಸಾವಿರಾರು ವರ್ಷಗಳಿಂದ ಕೋಟ್ಯಾಂತರ ಜೀವ ರಾಶಿಗಳಿಗೆ ಆಶ್ರಯ ನೀಡಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಕಳೆದ 100 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಕೃತಿಗೆ ದಕ್ಕೆ ತರುವ ಕೆಲಸ ಮಾಡಿದ್ದಾರೆ. ಇದು ಹೀಗೆಯೆ ಮುಂದುವರೆದರೆ ವಿನಾಶ ತಪ್ಪಿದ್ದಲ್ಲ ಎಂದರು.
ಇಶಾ ಫೌಂಡೇಶನ್ ಬಸವರಾಜ ಬಿರಾದಾರ ಮಣ್ಣಿನ ಮಹತ್ವಗಳನ್ನು ತಿಳಿಸಿ, ಮಣ್ಣಿನಲ್ಲಿರುವ ಉತ್ತಮ ಅಂಶಗಳು ಕಣ್ಮರೆಯಾಗಿ, ಬೆಳೆಯುವ ಬೆಳೆಯಲ್ಲಿ ಶರೀರಕ್ಕೆ ದೊರಕಬೇಕಿದ್ದ ಪೆÇೀಷಕಾಂಶಗಳ ಅಲಭ್ಯತೆಯಿಂದ ರೋಗರುಜಿನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಸರಿಯಾದ ಆಹಾರ ಅಲಭ್ಯತೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ವಿಜಯಪುರದಿಂದ ದೆಹಲಿಯವರೆಗೆ ಮಣ್ಣು ಉಳಿಸಿ ಜಾಗೃತಿ ಸೈಕಲ್ ಜಾಥಾ ನಡೆಸಿದ ರೇಲ್ವೆ ನೌಕರ ಮುತ್ತಣ್ಣ ಬಿರಾದಾರ ಅವರಿಗೆ ಅಭಿನಂದಿಸಲಾಯಿತು.
ಕೃಷಿ ವಿವಿ ಪ್ರಾಧ್ಯಾಪಕ ಡಾ.ರವೀಂದ್ರ ಬೆಳ್ಳಿ, ವಿಜಯಪುರದವರಾದ ಸದ್ಯ ಲೇಹ ಲಡಾಕ್ನಲ್ಲಿರುವ ಮೇಜರ್ ಸಂತೋಷ ಸೊಣಗಿ ಮಾತನಾಡಿದರು. ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಸಚೀನ ಪಾಟೀಲ, ಡಾ.ಪ್ರವೀಣ ಬಗಲಿ, ಶಂಭು ಕರ್ಪೂರಮಠ, ಬಸವರಾಜ ದೇವರ, ಸಂತೋಷ ಅವರಸಂಗ, ಶಿವಕುಮಾರ ಉಪ್ಪಿನ ಮತ್ತಿತರರು ಪಾಲ್ಗೊಂಡಿದ್ದರು.