ವಿಜಯಪುರ: ಕಬ್ಬಿಗೆ ಎಫ್ಆರ್ಪಿ ದರ ಘೋಷಿಸದಿದ್ದರೆ ಮತ್ತೆ ಬಾಲಾಜಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಧರಣಿ ಸತ್ಯಾಗ್ರಹಕ್ಕೆ ಅಣಿಯಾಗಲಾಗುವುದು ಎಂದು ರೈತರು ಘೋಷಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 11 ನೇ ದಿನಕ್ಕೆ ಕಾಲಿರಿಸಿದ ಸಂಧರ್ಭದಲ್ಲಿ ಭಾಗವಹಿಸಿದ ಕಬ್ಬು ಬೆಳೆಗಾರರು ಈ ನಿರ್ಧಾರ ಕೈಗೊಂಡರು.
ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸಂಘಟನೆಯ ತಾಳಿಕೋಟಿ ತಾಲೂಕಾ ಘಟಕದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಮಾತನಾಡಿ, ಮುದ್ದೇಬಿಹಾಳ ತಾಲೂಕಿನ ಯರಗಲ್ ಬಳಿ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಉದ್ದೇಶ ಪೂರ್ವಕವಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಒಂದು ಬಾರಿ ಹೋರಾಟಕ್ಕೆ ಮಣಿದು ಎಫ್ಆರ್ಪಿ ದರ ಹೆಚ್ಚಿಗೆ ಮಾಡಿದರೆ ಪ್ರತಿ ವರ್ಷವೂ ರೈತರು ಹೋರಾಟ ಮಾಡುತ್ತಾರೆ. ಪ್ರತಿವರ್ಷವು ನಾವು ಎಫ್ಆರ್ಪಿ ದರ ಹೆಚ್ಚಿಗೆ ಮಾಡಿ ಎಲ್ಲಿಂದ ಹಣ ಕೊಡುವುದು. ಹೀಗಾಗಿ ಎಫ್ಆರ್ಪಿ ದರ ಹೆಚ್ಚಿಸಲು ಮೊಂಡುತನ ಪ್ರದರ್ಶಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆ ಕಾರ್ಖಾನೆ ಬಳಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ರಾತ್ರಿ ಹೊತ್ತಿನಲ್ಲಿ ಸಭೆ ಸೇರಿದಾಗ ಒಟ್ಟಾರೆ ಹೋರಾಟಕ್ಕೆ ಗೌರವಕ್ಕೊಟ್ಟು ಜಿಲ್ಲಾಧಿಕಾರಿಗಳ ಮುಂದೆ ಸಿಹಿ ಸುದ್ದಿ ಕೊಡುವುದಾಗಿ ಬಾಲಾಜಿ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರು ಆಡಳಿತ ಮಂಡಳಿ ಭರವಸೆ ನೀಡಿದ್ದಾರೆ. ಆದರೆ ಕೊಟ್ಟ ಭರವಸೆಯನ್ನು ಮರೆತು ನಾವು ಬೀದಿಗೆ ಬಂದು ಚಳಿಯನ್ನು ಲೆಕ್ಕಿಸದೆ ಕಳೆದ 10 ದಿನಗಳಿಂದ ಧರಣಿ ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದೇವೆ. ಸ್ವಲ್ಪವೂ ಮಾನವೀಯತೆ ಇಲ್ಲದ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರು. ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಇದೇ ರೀತಿ ಮೊಂಡುತನ ಮುಂದುರೆಸಿದರೇ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಚ್ಚರಿಸಿದರು.