ವಿಜಯಪುರ: ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇರಿದಂತೆ ಇತರೆ ರಸ್ತೆಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತೆ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿ.ದೇವರಾಜ್ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ಡಿ.ಎಸ್. ವೀರಯ್ಯ ಅವರು ಹೇಳಿದರು.
ನಗರದ ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿ.ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಲವು ಮೂಲ ಸೌಲಭ್ಯವುಳ್ಳ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ವಿಜಯಪುರದಲ್ಲಿಯೂ ಸಹ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ವಿಜಯಪುರ ಗಡಿ ಜಿಲ್ಲೆಯಾಗಿರುವ ಹಿನ್ನಲೆಯಲ್ಲಿ ಸೋಲಾಪುರ, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಹೆಚ್ಚಿರುವುದರಿಂದ ವಿಜಯಪುರ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಮೀನು ಗುರುತಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಬುರಣಾಪುರ-ಮದಭಾವಿ, ಚಡಚಣ –ಮರಗೂರ, ಮುಳವಾಡ ಕೆಐಡಿಬಿ ಸ್ಥಗಳಲ್ಲಿ ಜಮೀನು ಗುರುತಿಸಲಾಗಿದ್ದು, ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲೆಯಲಿ ಶೀಘ್ರದಲ್ಲಿಯೇ ಜಮೀನು ಗುರುತಿಸಿ ಸುಸಜ್ಜಿತವಾದ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯದಾದ್ಯಂತೆ ಡಿ.ದೇವರಾಜ್ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ವತಿಯಿಂದ 7 ಟ್ರಕ್ ಟರ್ಮಿನಲ್ಗಳು ಕಾರ್ಯಾರಂಭಗೊಳ್ಳುತ್ತಿವೆ. ಬೆಂಗಳೂರಿನಲ್ಲಿ 2 ಟರ್ಮಿನಲ್ಗಳಿವೆ. ಯಶವಂತಪುರದಲ್ಲಿ 46 ಎಕರೆ ಜಮೀನಿನಲ್ಲಿ ಸುಮಾರು 2 ಸಾವಿರ ಟ್ರಕ್-ಲಾರಿ ನಿಲುಗಡೆಗೆ ಅವಕಾಶವಿರುವ ಟರ್ಮಿನಲ್, ದಾಸನಪುರ ತುಮಕೂರು ಹೆದ್ದಾರಿಯಲ್ಲಿ 1 ಸಾವಿರ ಲಾರಿಗಳು ನಿಲುಗಡೆಗೆ ಅವಕಾಶವಿರುವ ಟರ್ಮಿನಲ್ ಮತ್ತು ಮೈಸೂರು ನಂಜನಗೂಡು ಟ್ರಕ್ ಟರ್ಮಿನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ನಗರಕ್ಕೆ ಹೊಂದಿಕೊಂಡಿರುವ ಸ್ಥಳ ಗುರುತಿಸುವಂತೆ ಅಧ್ಯಕ್ಷರ ಬೇಡಿಕೆಯಾಗಿತ್ತು. ನಗರಕ್ಕೆ ಹೊಂದಿಕೊಂಡಿರುವ ಜಮೀನು ಲಭ್ಯವಾಗದಿದ್ದರೂ ಸಹ ಹೆದ್ದಾರಿಗೆ ಹೊಂದಿಕೊಂಡಿರುವ ಚಡಚಣ ಸಮೀಪದ ಮರಗೂರ ಮತ್ತು ಶಿರನಾಳದಲ್ಲಿ ಜಮೀನನ್ನು ಗುರುತಿಸಲಾಗಿದೆ. ಬುರಣಾಪುರ-ಮೆದಭಾವಿ, ಅದರಂತೆ ಮುಳವಾಡ ಕೆಐಎಡಿಬಿಯಲ್ಲಿಯೂ ಸಹ ಜಮೀನು ಲಭ್ಯವಿದ್ದು, ಒಟ್ಟಾರೆ 4 ಸ್ಥಳಗಳನ್ನು ಗುರುತಿಸಲಾಗಿದ್ದು, ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ನಂತರ ಈ ಕುರಿತು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.