ವಿಜಯಪುರ: ವಿಶೇಷ ಚೇತನರಿಗಾಗಿ ಸಾಧನ ಸಲಕರಣೆ ವಿತರಿಸುವ ಅಂಗವಾಗಿ ಇದೆ ದಿನಾಂಕ 24 ಮತ್ತು 25 ರಂದು ನಗರದ ಶಾಹೀನ ಕಾಲೇಜು ಹಾಗೂ ಅಲ್-ಅಮೀನ ಮೆಡಿಕಲ್ ಕಾಲೇಜು ಆವರಣದಲ್ಲಿ ಅಂಗವಿಕಲರ ಮೌಲ್ಯಮಾಪನ ಶಿಬಿರ ಆಯೋಜಿಸಲಾಗಿದೆ ಎಂದು ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಿಇಓ ಡಾ. ತೌಸೀಫ್ ಮಡಿಕೇರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ವಿಕಲಚೇತನರ ಸಂಸ್ಥೆಯ ಸಿಕಂದರಾಬಾದ್ನ ದಕ್ಷಿಣ ಪ್ರಾದೇಶಿಕ ಕೇಂದ್ರದ ಹಾಗೂ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಅಲ್-ಅಮೀನ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಇನ್ನು ಈ ಶಿಬಿರದಲ್ಲಿ ನವದೆಹಲಿ ಹಾಗೂ ಹೈದರಾಬಾದ್ನ ನುರಿತ ವೈಧ್ಯರ ತಂಡ ಭಾಗವಹಿಸಿಲಿದೆ. ಡಿ. 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿಜಯಪುರ ತಾಲೂಕಿನ ವಿಶೇಷಚೇತನರಿಗಾಗಿ ಆಯೋಜಿಸಲಾಗಿದೆ ಹಾಗೂ ಡಿ.25 ರಂದು ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ವಿಶೇಷ ಚೇತನರಿಗಾಗಿ ಅವಕಾಶ ಕಲ್ಪಿಸಲಾಗಿದೆ ಎಂದರು. ಮೌಲ್ಯಮಾಪನದಲ್ಲಿ ಭಾಗವಹಿಸಿದವರಿಗೆ ಬರುವ 2-3 ತಿಂಗಳಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ದೈಹಿಕ ಅಂಗವಿಕಲತ ಸಂಸ್ಥೆಯ ಸಿಕಂದರಾಬಾದ ದಕ್ಷಿಣ ಪ್ರಾದೇಶಿಕ ಕೇಂದ್ರವು ಮುಂದಿನ ದಿನಗಳಲ್ಲಿ ತ್ರಿಚಕ್ರ ಸೈಕಲ್, ಮಡಚುವ ಗಾಲಿ ಕುರ್ಚಿ, ಸಹಾಯಕ ಊರುಗೋಲು, ಮೊಣಕೈ ಊರುಗೋಲು, ಊರುಗೋಲು (ದೊಡ್ಡ ಬಗೆಯ), ಮಡಚುವ ವಾಕರ್, ರೊಲೇಟರ್(ಬಿ), ಸಿ.ಪಿ.ಕುರ್ಚಿ, ಎಂ.ಆರ್.ಕಿಟ್, ಸ್ಮಾರ್ಟ್ ಕೇನ್, ಎಡಿಎಲ್ ಕಿಟ್ ಹಾಗೂ ಕುಷ್ಠರೋಗ ಭಾಧಿತರಿಗೆ ಕೃತಕ ಅಂಗ ಹಾಗೂ ಕ್ಯಾಲಿಪರ್ ಸೇರಿದಂತೆ 12 ವಿಧದ ಸಾಧನ, ಸಲಕರಣೆ ವಿತರಿಸಲಾಗುವುದು ಎಂದರು.
ಇತ್ತೀಚೆಗೆ ಬೀದರ್ನ ಶಾಹೀನ್ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದ ಪ್ರಯೋಜನವನ್ನು 800 ಜನ ವಿಶೇಷಚೇತನರು ಈಗಾಗಲೇ ಪಡೆದುಕೊಂಡಿದ್ದು ಅದರಂತೆಯೆ ವಿಜಯಪುರ ಜಿಲ್ಲೆಯ ವಿಶೇಷಚೇತನರು ಇದರ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಶಿಬಿರದಲ್ಲಿ ಭಾಗವಹಿಸುವವರು ಅಂಗವೈಕಲ್ಯ ಪ್ರಮಾಣ ಪತ್ರ, ಪೂರ್ಣ ಮತ್ತು ಪಾಸ್ಪೋರ್ಟ ಅಳತೆಯ ಭಾವಚಿತ್ರ, ಆದಾಯ ಪ್ರಮಾಣ ಪತ್ರ ಅಥವಾ ಬಿಪಿಎಲ್ ಕಾರ್ಡ ಹಾಗೂ ಆಧಾರ ಕಾರ್ಡ ದಾಖಲಾತಿಗಳನ್ನು ತರಬೇಕೆಂದು ಹೇಳಿದರು.
ಇನ್ನು ಶಿಬಿರದಲ್ಲಿ ಭಾಗವಹಿಸುವವರಿಗೆ ಅವರ ತಾಲೂಕ ಕೇಂದ್ರದಿಂದ ಶಿಬಿರ ನಡೆಯುವ ಸ್ಥಳಕ್ಕೆ ಕರೆ ತರಲು ಶಾಹೀನ ಸಂಸ್ಥೆವತಿಯಿಂದ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8660264965ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಜಯಪುರ ಶಾಹೀನ್ ಕಾಲೇಜು ನಿರ್ದೇಶಕ ಶಾನೂರ ಸಾಂಬ್ರೆಕರ ಉಪಸ್ಥಿತರಿದ್ದರು.