ವಿಜಯಪುರ: ಮಹಿಳಾ ಶಿಕ್ಷಣ ಸಮಾಜದ ಅಭಿವೃದ್ದಿಗೆ ಆಧಾರವಾಗಿದ್ದು ಈ ನಿಟ್ಟಿನಲ್ಲಿ 2003ರಲ್ಲಿ ಶಿವಶರಣೆ ಅಕ್ಕಮಹಾದೇವಿ ಏಕೈಕ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಸ್ಥಾಪಿಸಲಾಗಿದ್ದು, ಮಹಿಳಾ ಸಶಸ್ತ್ರೀಕರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಸ್ತ್ರೀ ಶಕ್ತಿಯು ನಮ್ಮ ದೇಶದ ಪ್ರತೀಕ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ 13 ಮತ್ತು 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮೂಲಕ ಅತ್ಯಂತ ಜನಪ್ರಿಯತೆ ಗಳಿಸಿರುವ ಸಮಾಜ ಸೇವಕಿ ಡಾ.ಎಸ್.ಜಿ.ಸುಶೀಲಮ್ಮ ಹಾಗೂ ದಕ್ಷ ಆಡಳಿತಗಾರ್ತಿ ಎಂದು ಹೆಸರುವಾಸಿಯಾಗಿರುವ ಬೀದರಿನ ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಶ್ರೇಷ್ಠ ಭಾರತ, ನಿರ್ಭರ ಭಾರತ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಧಾನ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಎಲ್ಲ ರಂಗದಲ್ಲೂ ಮಹಿಳೆ ಕೆಲಸ ಮಾಡಬೇಕು. ಮಹಿಳಾ ಸಶಕ್ತೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಇದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಚಿನ್ನದ ಪದಕ ಪಡೆದ ಎಲ್ಲ ಮಹಿಳೆಯರು ರಾಷ್ಟ್ರಕ್ಕೆ ಯೋಗದಾನ ಕೊಡುವುದರ ಜೊತೆಗೆ ಪ್ರೇರಣೆ ನೀಡಬೇಕು. ಈ ವಿಶ್ವವಿದ್ಯಾನಿಲಯದಿಂದ ಉತ್ತಮ ಮಟ್ಟದ ಶಿಕ್ಷಣ ತೆಗೆದುಕೊಂಡು ತಮ್ಮ ಜೀವನದಲ್ಲಿ ಮುಂದೆ ಹೋಗಲು ಹಾಗೂ ಸಬಲೀಕರಣ ಹೊಂದಲು ಈ ವಿಶ್ವವಿದ್ಯಾನಿಲಯ ಸಹಾಯಕವಾಗಿದೆ. ಮಹಿಳಾ ವಿಶ್ವವಿದ್ಯಾನಿಲಯವು ರಾಷ್ಟ್ರಕ್ಕೆ ಆದರ್ಶ ವಿಶ್ವವಿದ್ಯಾನಿಲವಾಗಬೇಕು ಎಂದು ಹೇಳಿದರು.
*ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಾಂತಿಶ್ರೀ ಧೂಳಿಪುಡಿ ಪಂಡಿತ್* ಅವರು ಮಾತನಾಡಿ, ಉನ್ನತ ಮಟ್ಟದ ಮಹಿಳಾ ಶಿಕ್ಷಣದ ಮೂಲಕ ಮಾತ್ರ ಸಮಾಜ ಮತ್ತು ದೇಶವು ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲು ಸಾಧ್ಯ. ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಆಕೆಯ ಕುಟುಂಬ, ಸಮಾಜ ಮತ್ತು ದೊಡ್ಡ ರಾಷ್ಟ್ರದ ಭವಿಷ್ಯವನ್ನು ಸುಧಾರಿಸುವುದು ಎನ್ನುವುದಾಗಿದೆ. ಭಾರತದ ಪೀಳಿಗೆಯ ಪರಿವರ್ತನೆಗೆ ಮಹಿಳಾ ಶಿಕ್ಷಣ ಅತ್ಯಗತ್ಯ ಎಂದು ಅವರು ಹೇಳಿದರು.
ಭಾರತವು ಜಗತ್ತಿನಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯಬೇಕಾದರೆ ಮಹಿಳೆಯರ ಪ್ರಗತಿ ಮತ್ತು ಸಬಲೀಕರಣವು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಉನ್ನತ ಶಿಕ್ಷಣವು ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯ ಎಂಜಿನ್ ಇದ್ದಂತೆ. ದೇಶದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಹಿಳಾ ಶಿಕ್ಷಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಎಲ್ಲರೂ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಮೌನ ಮತ್ತು ತ್ಯಾಗ ಬಹು ದೊಡ್ಡದಾಗಿದೆ. ಮನೆಯಲ್ಲಿ ಅವರ ಕಠಿಣ ಪರಿಶ್ರಮ, ಕುಟುಂಬ ವ್ಯವಹಾರ ಮತ್ತು ಕೃಷಿಗಳನ್ನು ನಡೆಸುವುದು ಮುಖ್ಯವಲ್ಲ. ಹಲವಾರು ವಿಧಗಳಲ್ಲಿ, ಇದು ಯಾವುದೇ ಲಾಭಾಂಶವಿಲ್ಲದ ಕರ್ತವ್ಯವಾಗಿದೆ. ಸಮಾಜವು ಅವಳ ಗುರುತು, ಸಾಮಥ್ರ್ಯ ಮತ್ತು ಹಕ್ಕುಗಳ ಬಗ್ಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡುವ ಏಕೈಕ ಮಾರ್ಗವೆಂದರೆ ಮಹಿಳಾ ಶಿಕ್ಷಣ. ಆದ್ದರಿಂದ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಪದವೀಧರರಾಗಿರುವ ನಿಮಗೆ ಹೊಸ ಸವಾಲು ಎದುರಾಗಹುದು. ಈ ಸವಾಲಿನಿಂದ ಕುಗ್ಗಬೇಡಿ. ಸಮಾಜವನ್ನು ಎದುರಿಸುವ ಸಿದ್ಧತೆಯೇ ನಾಯಕನನ್ನಾಗಿ ಮಾಡುತ್ತದೆ. ನಮ್ಮ ಆತ್ಮಗಳು ಖ್ಯಾತಿ, ಸೌಕರ್ಯ, ಸಂಪತ್ತು ಅಥವಾ ಅಧಿಕಾರಕ್ಕಾಗಿ ಹಸಿದಿಲ್ಲ. ನಮ್ಮ ಆತ್ಮಗಳು ಅರ್ಥಕ್ಕಾಗಿ ಹಸಿದಿವೆ. ನಮ್ಮ ಜೀವನವು ಮುಖ್ಯವಾಗುವಂತೆ ನಾವು ಹೇಗೆ ಬದುಕಬೇಕೆಂದು ಉನ್ನತ ಶಿಕ್ಷಣದ ಮೂಲಕ ನಾವು ಕಂಡುಕೊಂಡಿದ್ದೇವೆ. ನಿಮ್ಮ ದೇಶ, ಸಂಸ್ಕೃತಿಯನ್ನು ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು.
ಕುಲಪತಿ ಪ್ರೊ: ಬಿ.ಕೆ.ತುಳಸಿಮಾಲ ಅವರು ಮಾತನಾಡಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವುದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ ದೂರದ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಮಹಾವಿದ್ಯಾಲಯಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಗೊಳಿಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಕೋರ್ಸುಗಳನ್ನು ಆರಂಭಿಸಿದೆ. ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದನುಸಾರ ಭಾಷಾ ಪಠ್ಯಪುಸ್ತಕಗಳನ್ನು ಪ್ರಸಾರಾಂಗದಿಂದ ಪ್ರಕಟಿಸಲು ತೀರ್ಮಾನಿಸಲಾಗಿದ್ದು ಪ್ರಕಟಣಾ ಕಾರ್ಯ ಪ್ರಗತಿಯಲ್ಲಿದೆ, ಈಗ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 04 ನಿಕಾಯಗಳಲ್ಲಿ 350 ಸ್ನಾತಕ ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ತೊಡಗಿದ್ದಾರೆ ಎಂದು ಪ್ರೊ.ತುಳಸಿಮಾಲ ವಿವರಿಸಿದರು.
ಹೊಸ ಕಟ್ಟಡಗಳ ನಿರ್ಮಾಣ, ಹಳೆಯ ಕಟ್ಟಡಗಳ ದುರಸ್ತಿಕಾರ್ಯ ಹಾಗೂ ಪ್ರಯೋಗಾಲಯಗಳ ಉನ್ನತೀಕರಣಕ್ಕಾಗಿ ರೂಸಾ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಗ್ರಂಥಾಲಯ ಕಟ್ಟಡದ ವಿಸ್ತರಣಾ ಕಾಮಗಾರಿಯು ಮುಕ್ತಾಯಗೊಂಡಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿರುವುದರಿಂದ ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ ಮತ್ತು ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ ಎಂದೂ ಅವರು ಹೇಳಿದರು.
ಮಹಿಳಾ ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಹಾಗೂ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡುತ್ತಿದೆ. ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ವಿಶ್ವವಿದ್ಯಾನಿಲಯದ ವೆಬ್ಸೈಟ್ (ಜಾಲತಾಣ)ಅನ್ನು ಸಿದ್ಧಪಡಿಸಿ ಅಳವಡಿಸಲಾಗಿದೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ವಿಶ್ವವಿದ್ಯಾನಿಲಯದ ಮಾಹಿತಿಗಳನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ ಸೇವೆಯು ಕನ್ನಡ ಹಾಗೂ ಇಂಗ್ಲೀಷ್ ಎರಡು ಅವತರಣಿಕೆಗಳಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ಮಹಿಳಾ ವಿಶ್ವವಿದ್ಯಾನಿಲಯವು ಸಮುದಾಯದೊಂದಿಗೆ ಸಹಭಾಗಿತ್ವ ಹೊಂದುವ ನೆಲೆಯಲ್ಲಿ 5 ಗ್ರಾಮಗಳನ್ನು ದತ್ತು ಪಡೆದಿದ್ದು ಅಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪೌರತ್ವ ತರಬೇತಿ ಶಿಬಿರ, ಎನ್.ಎಸ್.ಎಸ್ ಶಿಬಿರಗಳು, ಕ್ರೀಡೆ ಮತ್ತು ಮನೋಲ್ಲಾಸ ಶಿಬಿರಗಳು ನಿರಂತರವಾಗಿ ಹಮ್ಮಿಕೊಂಡು, ವಿಶ್ವವಿದ್ಯಾಲಯದ ಮಹಿಳಾ ಪದವೀಧರರನ್ನು ನಾಯಕ ಗುಣ ಹೊಂದಿದ ಮಹತ್ತರ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ,
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ,ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ ಸಿಂಧೆ,ಜಿಲ್ಲಾ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ, ಕುಲಸಚಿವ ಪ್ರೊ.ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ, ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.