ವಿಜಯಪುರ: ಶರಣಸಾಹಿತ್ಯ ಪರಿಷತ್ ಗೌರವಾಧ್ಯಕ್ಷ, ರಾಧಾಕೃಷ್ಣ ನಗರದ ಶಿವಬಸವ ಯೋಗಾಶ್ರಮದ ಪೂಜ್ಯ ಶಂಭುಲಿಂಗ ಸ್ವಾಮಿಜಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.
ಸಂಸಾರಸ್ಥರಾಗಿದ್ದ ಶಂಭುಲಿಂಗ ಸ್ವಾಮೀಜಿಯವರು ಬಸವ ತತ್ವಗಳಿಗೆ ಮಾರು ಹೋಗಿ ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿಯವರಿಂದ ದೀಕ್ಷೆ ಪಡೆದು ಕನ್ನಡ, ಹಿಂದಿ, ಸಂಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದುಕೊಂಡು ಜಿಲ್ಲೆಗಳಲ್ಲಿ ಸಂಚರಿಸಿ, ಪ್ರವಚನಗಳ ಮೂಲಕ ಧರ್ಮ ಪ್ರಚಾರ ಮಾಡುವಲ್ಲಿ ನಿರತರಾಗಿದ್ದರು.
ಸ್ವಾಮೀಜಿಯವರು ಜಲನಗರ ತಮ್ಮಆಶ್ರಮದಲ್ಲಿ ಪ್ರತಿ ತಿಂಗಳು ಶಿವಾನುಭವ ಗೋಷ್ಠಿಯನ್ನು ಏರ್ಪಡಿಸಿ, ಬಸವ ಸಾಹಿತ್ಯದ ಮಹತ್ವ ತಿಳಿಸುತ್ತಿದ್ದರು. ಸ್ವಾಮೀಜಿಯವರ ಸ್ವಗ್ರಾಮ ಬಳಗಾನೂರ ಗ್ರಾಮದ ತೋಟದಲ್ಲಿ ಬುಧವಾರ ಅಂತ್ಯಕ್ರಿಯೆ ಜರುಗಿತು.
ಸಂತಾಪ: ಬಸವ ತತ್ವದ ಮಹತ್ವಗಳನ್ನು ಜನರಿಗೆತಲುಪಿಸುವಲ್ಲಿ ನಿರತರಾಗಿದ್ದ ಶಂಭುಲಿಂಗಸ್ವಾಮೀಜಿಯವರು ಅಕಾಲಿಕವಾಗಿ ಅಗಲಿರುವುದು ನೋವು ತಂದಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಕೇಂದ್ರದ ಪದಾಧಿಕಾರಿಗಳು ಸ್ವಾಮೀಜಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.