ವಿಜಯಪುರ: ಖಾಸಗಿ ವಾಹಿನಿ ವರದಿಗಾರನ ಮೇಲೆ ಅಧಿಕಾರಿಯೋರ್ವ ಹಲ್ಲೆಗೈದಿರುವ ಘಟನೆ ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಖಾಸಗಿ ವಾಹಿನಿ ವರದಿಗಾರ ಶರಣಪ್ಪ ಮಾದರ ಮೇಲೆ ಎಇಇ ಎಸ್ಟಿ ಬಬಲೇಶ್ವರ ಹಲ್ಲೆಗೈದಿದ್ದಾರೆ. ಇದು ಖಂಡನೀಯ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಪದೇ ಪದೇ ವರದಿಗಾರರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕಾನೂನು ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು. ಅಧಿಕಾರಿ ಬಬಲೇಶ್ವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.