ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ಆಗ್ರಹಿಸಿದರು.
ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದ್ರೆ ಹಿಂದುಳಿದವರು ನಿರ್ನಾಮ ಆಗ್ತಾರೆ. ಅಲ್ಲದೇ, ರಾಜ್ಯ ಸರ್ಕಾರ ಕೂಡ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡುತ್ತಿದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು ಎಂದು ಒತ್ತಾಯಿಸಿದರು. ಪಂಚಮಸಾಲಿ ಮಠಗಳಿವೆ. ಅದರಿಂದ ಕೋಟ್ಯಾಂತರ ವ್ಯವಹಾರಗಳು ನಡೆಯುತ್ತವೆ. ಆದ್ರೇ, ನಮಗೆ ಯಾವುದೇ ಮಠಗಳು ಇಲ್ಲ. ಇದರಿಂದ ನಾವು ಪ್ರಬಲವಾದ ಪಂಚಮಸಾಲಿ ವಿರುದ್ಧ ಹೋರಾಡಲು ಆಗುವುದಿಲ್ಲ ಎಂದರು. ಶಾಸಕ ಯತ್ನಾಳ ಒಂದು ಸಮಾಜದ ಪರವಾಗಿ ಮಾತಾನಾಡುವುದು ಸರಿಯಲ್ಲ. ಹಿಂದುತ್ವ ಪರ ಮಾತ್ರ ಬ್ಯಾಟಿಂಗ್ ಮಾಡಬಾರದು. ಒಬ್ಬ ಶಾಸಕನಾಗಿ ಎಲ್ಲ ಧರ್ಮದವರನ್ನು ಸಮನಾಗಿ ಕಾಣಬೇಕು. ಇಲ್ಲದೇ ಹೋದ್ರೇ ಈ ಸಲ ಚುನಾವಣೆಯಲ್ಲಿ ಶಾಸಕ ಯತ್ನಾಳಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.