ವಿಜಯಪುರ: ಇಬ್ರಾಹಿಂಪೂರ ರೈಲ್ವೇ ಮೇಲ್ಸೆತುವೆ ಮಂಗಳವಾರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳೆಯುತ್ತಿರುವ ವಿಜಯಪುರ ಮಹಾನಗರ ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಈ ಮೇಲ್ಸೆತುವೆ ನಿರ್ಮಿಸಲಾಗಿದೆ, ರೈಲ್ವೇ ಕ್ರಾಸಿಂಗ್ ನಿಂದ ಸುಮಾರು ಹೊತ್ತುಗಳ ಕಾಲ ವಾಹನ ನಿಲ್ಲುವ ತಾಪತ್ರಯಕ್ಕೆ ಈಗ ಮುಕ್ತಿ ದೊರಕಲಿದೆ, ಈ ಕಾರಣಕ್ಕಾಗಿಯೇ 23 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯಬೇಕಿತ್ತು, ಆದರೆ ಕೊರೊನಾ ಮಹಾಮಾರಿಯಿಂದಾಗಿ ಹಾಗೂ ಅನೇಕ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬಗೊಂಡಿತ್ತು, ಈ ಕಾರಣಕ್ಕಾಗಿ ನಾನು ಸಮಸ್ತ ಪ್ರಜಾಪ್ರಭುಗಳ ಕ್ಷಮೆಯಾಚಿಸುತ್ತೇನೆ, ಈಗ ಕಾಮಗಾರಿ ಸಂಪೂರ್ಣವಾಗಿದ್ದು,
ಈಗ ಮಂಗಳವಾರ ಈ ರೈಲ್ವೆ ಮೇಲ್ಸೆತುವೆ ಸಂಚಾರಕ್ಕೆ ಮುಕ್ತವಾಗಲಿದೆ. ಜನತೆಯ ಆಶೀರ್ವಾದ ಬಲದಿಂದ ಆಯ್ಕೆಯಾಗಿರುವ ನಾನು ಸಂಸದರ ಅನುದಾನದ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವೆ, ಕೇಂದ್ರ ಸಚಿವರ ಮನವೊಲಿಸಿ ಸಾವಿರಾರು ಕೋಟಿ ರೂ.ಗಳ ಅನುದಾನದ ಅಡಿಯಲ್ಲಿ ಅನೇಕ ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಂಡಿರುವೆ, ಈಗ ಇಬ್ರಾಹಿಂಪೂರ ಮೇಲ್ಸೆತುವೆ ಸಹ ಜನರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಸಂಸದರು ಹೇಳಿದ್ದಾರೆ.