ವಿಜಯಪುರ: ವಿಜಯಪುರ ಜಿಲ್ಲೆಯ ಜನತೆ ಸದಾ ಬಿಸಿಲಿನ ಬೇಗೆಯಿಂದ ಬಳಲಿ ಹೋಗಿರುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಅಂತೂ ಮಧ್ಯಾಹ್ನದ ಹೊತ್ತಿಗೆ ಮನೆಯಿಂದ ಹೊರಬರಲು ಆಗಲ್ಲ. ಅಷ್ಟೋಂದು ಬಿಸಿಲಿರುತ್ತದೆ, ಆದರೆ ಈಗ ಅದೇ ತರಹ ಚಳಿಯೂ ಆವರಿಸಿದೆ. ವಿಜಯಪುರದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಹವಾಮಾನ ವರದಿಯಲ್ಲಿ ಜನೇವರಿ 10 ರಂದು ಕನಿಷ್ಟ 6.5 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಕಳೆದ 10 ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ದಾಖಲಾದ ಕನಿಷ್ಟ ತಾಪಮಾನವಾಗಿದೆ. ಇದೇ ನವೆಂಬರ್ 21 ರಂದು 7.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಹಾಗೂ ಗರಿಷ್ಟ 28.0 ಡಿಗ್ರಿ ತಾಪಮಾನ ದಾಖಲಾಗಿತ್ತು. ಆದ್ರೆ ಇದನ್ನು ಮೀರಿಸುವಷ್ಟು ಚಳಿ ಜನವರಿ 9 ರಂದು 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ರೀತಿ ಏಕಾಏಕಿ ತಾಪಮಾನ ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗೆ ಬರಲು ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಉತ್ತರ ಭಾರತದಲ್ಲಿ ಹೆಚ್ಚು ದಟ್ಟನೆ ಮಂಜು ಸುರಿಯುತ್ತಿದೆ.
ಜಿಲ್ಲೆಯಲ್ಲಿ 10 ವರ್ಷಗಳ ನಂತರ 6.5 ಕನಿಷ್ಟ ತಾಪಮಾನ ದಾಖಲಾಗಿದ್ರೆ, ನೆರೆ ಜಿಲ್ಲೆ ಬಾಗಲಕೋಟೆಯಲ್ಲಿ ಕನಿಷ್ಟ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಮೂರು ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ತೇವಾಂಶ ಹೆಚ್ಚಳದಿಂದ ಚಳಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಅನ್ನೋದು ಹವಾಮಾನ ಮಾಪನ ಕೇಂದ್ರದ ಅಧಿಕಾರಿಗಳ ಅಭಿಪ್ರಾಯವಾಗಿದೆ. 2020 ರಲ್ಲಿ 58 ಮಳೆ ದಿನಗಳಲ್ಲಿ 862.2 ಮೀಲಿ ಮೀಟರ್, 2021ರ 52 ಮಳೆ ದಿನಗಳಲ್ಲಿ 632.8 ಮೀಲಿ ಮೀಟರ್ ಹಾಗೂ 2021ರ 56 ಮಳೆ ದಿನಗಳಲ್ಲಿ 793.2ಮೀಲಿ ಮೀಟರ್ ಮಳೆಯಾಗಿದೆ. ಒಟ್ಟು ಜಿಲ್ಲೆಯ ಸರಾಸರಿ ಮಳೆ ಪ್ರಮಾಣ ಇರುವದು 594 ಮೀ.ಮೀಟರ್ ಮೂರು ವರ್ಷದಲ್ಲಿ ಕನಿಷ್ಠ 150-200ಮೀ.ಮೀಟರ್ ಮಳೆ ಹೆಚ್ಚಾದ ಕಾರಣ ಕಳೆದ 10 ವರ್ಷದಲ್ಲಿ ಚಳಿ ಕನಿಷ್ಠ ತಾಪಮಾನ 6.5 ಸೆಲ್ಸಿಯಸ್ ಆಗಲು ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ನದಿ, ಹಳ್ಳಕೊಳ್ಳದಲ್ಲಿ ಇನ್ನೂ ನೀರು ಇರೋದ್ರಿಂದ ತಾಪಮಾನ ಕಡಿಮೆ ದಾಖಲಾಗಿದೆ. ಹೀಗಾಗಿ ಜಿಲ್ಲೆಯ ಜನತೆ ಬೆಳಿಗ್ಗೆ ಹಾಗೂ ಸಾಯಂಕಾಲ ಅನಾವಶ್ಯಕ ಹೊರಗೆ ಬರದೇ, ಬಿಸಿ ನೀರು ಕುಡಿಯೋದು, ಜೊತೆಗೆ ಸ್ವೆಟರ್, ಕಿವಿ ಗವಸ ಹಾಕಿಕೊಂಡು ಚಳಿಯಿಂದ ರಕ್ಷಣೆ ಪಡೆಯಬೇಕು, ಚಿಕ್ಕ ಮಕ್ಕಳು, ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.