ವಿಜಯಪುರ: ಇದು ಎಲೆಕ್ಷನ್ ಹತ್ತಿರವಾದ ವರ್ಷ ಇದೆ. ಅದಕ್ಕಾಗಿ ರಾಜಕೀಯ ಪಕ್ಷಗಳು ಜಾತಿ, ಮತ್ತು ಧರ್ಮದ ವಿಚಾರವನ್ನು ಅತಿರೇಕವಾಗಿ ಸಂಘರ್ಷ ಮಾಡುತ್ತಿರುವುದನ್ನು ಜನ ನೋಡಿ ಬೇಸತ್ತಿದ್ದಾರೆ ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಹಾಗೂ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಹೇಳಿದರು. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲೇ ಇದನ್ನು ಮಾಡಬಾರದು. ಒಂದು ಸಮಾಜ ಮತ್ತೊಂದು ಸಮಾಜದ ಸಂಘರ್ಷ ಅವನತಿಗೆ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ. ಇಂತದ್ದಕ್ಕೆ ರಾಜಕೀಯ ಪಕ್ಷಗಳು ಪ್ರಚೋದನೆ ಕೊಡುವುದು ಒಳ್ಳೆಯದಲ್ಲ ಎಂದು ಸಲಹೆ ನೀಡಿದರು. ಅಲ್ಲದೇ, ಎಲ್ಲ ವರ್ಗದ, ಎಲ್ಲ ಸಮುದಾಯದ ಜನರನ್ನ ಸಮನಾಗಿ ಕಾಣಬೇಕು.
ಸಮಾಜದ ಅಭಿವೃದ್ಧಿಗೆ ಗಮನ ಹರಿಸಬೇಕು. ನಾಡಿಗೆ ಅನ್ನವನ್ನು ಕೊಡುವ ರೈತನ ಬಗ್ಗೆ ಕಾಳಜಿ ಆಗಬೇಕು. ಆತ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುವ ಅಗತ್ಯವಿದೆ ಎಂದರು. ಮೀಸಲಾತಿ ಕೇಳುವುದು ಎಲ್ಲರ ಹಕ್ಕು, ಅದು ತಪ್ಪಲ್ಲ. ಭಾರತ ಸಂವಿಧಾನದಲ್ಲಿ ಯಾರಿಗೆ ಎಷ್ಟು ಕೊಡಬೇಕು ಎಂಬುದು ಇದೆ. ಅದನ್ನು ಚಾಲನೆಯಲ್ಲಿ ತರುವಂತದ್ದು ರಾಜಕಾರಣಿಗಳ ಕರ್ತವ್ಯ ಆಗಿದೆ.
ನಾರಾಯಣಪುರ ಜಲಾಶಯದಲ್ಲಿ ಪ್ರಧಾನಿ ಮೋದಿ ಮಾಡಿರುವ ಕಾರ್ಯವನ್ನು ಜಗದ್ಗುರು ಶ್ಲಾಘಿಸಿದರು. ಅಲ್ಲದೇ, ದೇಶದ ಉದ್ದಗಲಕ್ಕೂ ಮೋದಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಬೆಳೆಯುತ್ತಿರುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶದ ಭದ್ರತೆ ಹಾಗೂ ಸಮಗ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಪ್ರಧಾನಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವುದು ಭಾರತೀಯರೆಲ್ಲರ ಸೌಭಾಗ್ಯ ಆಗಿದೆ. ರಾಜಕೀಯವಾಗಿ ಬೆಳೆಯುತ್ತಿರುವವರು ಪಕ್ಷಭೇದ ಮರೆತು ಸಮಗ್ರವಾಗಿ ಅಭಿವೃದ್ಧಿ ಮಾಡುವಂತದ್ದು ಎಲ್ಲರ ಕರ್ತವ್ಯ. ಅಂತಹ ಆದರ್ಶ ರಾಜಕಾರಣಿಗಳ ಗುಣಧರ್ಮವನ್ನು ಅಳವಡಿಸಿಕೊಂಡು ಜನ್ರಿಗೆ ಒಳ್ಳೆಯದಾಗುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.