ವಿಜಯಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏಳು ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿರುವ ಘಟನೆ ವಿಜಯಪುರ ಜಿಲ್ಲೆಯ
ಚಡಚಣ ತಾಲೂಕಿನ ನಂದರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ.
ಸಂಘದ ಸಿಇಒ ವಿವೇಕಾನಂದ ಗಿರೆಪ್ಪ ಬಿರಾದಾರ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಭಾರ ಸಿಇಒ ರಾಜಕುಮಾರ ಮಲ್ಲನಗೌಡ ಪಾಟೀಲ ದೂರು ನೀಡಿದ್ದಾರೆ. ಆರೋಪಿತ ವಿವೇಕಾನಂದನು 2014ರಲ್ಲಿ ಸಂಘದ ಸಿಇಒ ಎಂದು ನೇಮಕಗೊಂಡಿದ್ದು, ಸಂಬಂಧ ಪಟ್ಟ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ರೈತಾಪಿ ಜನರಿಗೆ ಸಾಲ ಬಟವಡೆ ಮಾಡುವುದು ಮತ್ತು ಸಾಲ ವಸೂಲಾತಿ ಮಾಡಿ ಸಂಘದ ಖಾತೆಗೆ ಜಮಾ ಮಾಡುವ ಕರ್ತವ್ಯ ನಿರ್ವಹಿಸುತ್ತಿದ್ದನು. ಆ ಪ್ರಕಾರ 2019-20 ಮತ್ತು 2020-21ನೇ ಸಾಲಿನಲ್ಲಿ ನಡೆದ ಕರ್ನಾಟಕ ಸಹಕಾರಿ ಸಂಘದ ಕಾಯ್ದೆ 1959ರ ಕಲಂ : 64 ಶಾಸನ ಬದ್ಧ ವಿಚಾರಾಣಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳು ವಿಚಾರಣೆ ನಡೆಸಿ ಮತ್ತು ಲೆಕ್ಕ ಪರಿಶೋಧನೆ ವರದಿ ಪ್ರಕಾರ ವಿವೇಕಾನಂದ ವಿವಿಧ ಮೂಲಗಳಿಂದ ಜಮಾ ಆದ ಒಟ್ಟು 7,23,72,702 ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆ ಮೂಲಕ ಸಂಘಕ್ಕೆ, ರೈತರಿಗೆ ಮೋಸ ಮಾಡಿದ್ದಾನೆ. ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.