ಧಾರವಾಡ: ಬಡ ಕುಟುಂಬಗಳನ್ನು ಹಾಗೂ ಹಳೇ ಮನೆ ಹೊಂದಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ನಿಧಿಯಾಸೆ ತೋರಿಸಿ ವಂಚನೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮೂಲದ ನಾಗಯ್ಯ ಹಾಗೂ ಧಾರವಾಡ ಜಿಲ್ಲೆಯ ನುಗ್ಗಿಕೇರಿ ಗ್ರಾಮ ಮಾರುತಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಆಸಾಮಿಗಳು ಗ್ರಾಮೀಣ ಭಾಗದ ಜನರಿಗೆ ನಿಮ್ಮ ಮನೆಯಲ್ಲಿ ನಿಧಿ ಇದೆ. ಅದನ್ನು ನಾವು ಹುಡುಕಿಕೊಡುತ್ತೇವೆ ಎಂದು ನಂಬಿಸಿ, ಇದಕ್ಕೊಂದು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ ಅವರಿಂದ ಹಣ ಪಡೆದು ವಂಚನೆ ಮಾಡಿ ಪರಾರಿಯಾಗುತ್ತಿದ್ದರು.
ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ಇತ್ತೀಚೆಗೆ ನಡೆದಿತ್ತು. ಇದರ ಮಾಹಿತಿ ಪಡೆದಿದ್ದ ನವಲಗುಂದ ಠಾಣೆಯ ಪೊಲೀಸರು ಇಬ್ಬರು ಖದೀಮರ ಮೇಲೆ ಕಣ್ಣಿಟ್ಟು ಈಗ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಈಗ ಇಬ್ಬರು ವಂಚಕರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು, ಇವರ ಹಿಂದೆ ಇನ್ನೂ ಅನೇಕರು ಇರುವ ಶಂಕೆಯನ್ನು ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳ್ಳಿಸಿದ್ದಾರೆ.