ಹುಬ್ಬಳ್ಳಿ: ಐತಿಹಾಸಿಕ ವಿಜಯಪುರ ನಗರದಲ್ಲಿ ಫೆ.4 ಮತ್ತು 5 ರಂದು ನಡೆಯಲಿರುವ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿಯೂ ಆಗಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟ ಭರವಸೆ ನೀಡಿದರು.
ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತ ಆಮಂತ್ರಣ ನೀಡಲು ಭಾನುವಾರ ಇಲ್ಲಿನ ಆದರ್ಶನಗರದ ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ನೇತೃತ್ವದ ನಿಯೋಗಕ್ಕೆ ಸಿಎಂ ಈ ಭರವಸೆ ನೀಡಿದರು. ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ ನಡೆಯಬೇಕು. ಅದು ಜಿಲ್ಲೆಯ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಬೇಕು ಎಂದು ಆಶಿಸಿದ್ದರು. ಹಾಗಾಗಿ ಅವರ ಆಸೆಯಂತೆ ಸಮ್ಮೇಳನವನ್ನು ಚೆನ್ನಾಗಿಯೇ ಮಾಡೋಣ. ವಿಜಯಪುರದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಲಿ ಎಂಬ ಸದಾಶಯ ನನ್ನದಾಗಿದೆ. ಹಾಗಾಗಿ ನಾನು ಸಮ್ಮೇಳನ ಉದ್ಘಾಟಿಸಲು ಆನಂದದಿಂದ ಆಗಮಿಸುವುದಾಗಿ ಪದಾಧಿಕಾರಿಗಳಿಗೆ ಸ್ಪಷ್ಟ ಭರವಸೆ ನೀಡಿದರು.
ಇದೇ ವೇಳೆ ಮುಖ್ಯಮಂತ್ರಿಯವರನ್ನು ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿಗಳಾದ ರಾಹುಲ್ ಆಪ್ಟೆ, ದೀಪಕ ಶಿಂತ್ರೆ, ಜಿಲ್ಲಾ ಕಾರ್ಯದರ್ಶಿ ಅವಿನಾಶ ಬಿದರಿ ಸೇರಿದಂತೆ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಹಾಗೂ ಹುಬ್ಬಳ್ಳಿಯ ಅನೇಕ ಪತ್ರಕರ್ತರಿದ್ದರು.