ವಿಜಯಪುರ: ಬಾಲಕಾರ್ಮಿಕ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರು ಕೂಡ ಈ ಬಾಲಕಾರ್ಮಿಕ ಅನಿಷ್ಟ ಪದ್ಧತಿ ವಿರುದ್ಧ ಜಾಗೃತರಾಗಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮುಂದಾಗಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಹೇಳಿದರು. ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೋರವಾರದ ವಾಲೆಂಟರಿ ಆರ್ಗನೈಜೇಶನ ಫಾರ್ ರೂರಲ್ ಡೆವೆಲಪಮೆಂಟ್ ಇವರ ಸಹಯೋಗದೊಂದಿಗೆ ಇತ್ತೀಚೆಗೆ ವಿಜಯಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ಅನಿಷ್ಟ ಪದ್ದತಿ ಹೋಗಲಾಡಿಸುವ ವಿಷಯಾಧಾರಿತ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ವೆಂಕಣ್ಣ ಬಿ ಹೊಸಮನಿ ಇವರು ಮಾತನಾಡಿ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಹಾಗೂ ಜನರ ಮೇಲೆ ಪ್ರಭಾವ ಬೀರುವ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಚಾಗಶೆಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಎಸ್.ಜಿ ಖೈನೂರ, ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಜಗದೇವಿ ಸಜ್ಜನ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಕುಮಾರಿ ನೀಲಮ್ಮ ಖೇಡಗಿ, ವಕೀಲರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.