ವಿಜಯಪುರ 31. ನೆರೆಯ ಜಿಲ್ಲೆ, ರಾಜ್ಯಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಭಾರೀ ವಾಹನಗಳು ಸಂಚರಿಸುತ್ತಿರುವದರಿಂದ ದಟ್ಟಣೆ ಉಂಟಾಗಿದ್ದು, ಇದನ್ನು ತಪ್ಪಿಸಲು ಪೆರಿಪೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಇದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ತಿಳಿಸಿರುವ ಅವರು, ವಿಜಯಪುರ ನೆರೆಯ ಬೆಳಗಾವಿ, ಕಲಬುರಗಿ; ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ; ಗೋವಾ ಮತ್ತು ಇತರ ಪ್ರಮುಖ ನಗರಗಳ ಸಂಪರ್ಕ ಸೇತುವೆ ಆಗಿದ್ದು, ಈ ಕಾರಣದಿಂದ ಭಾರೀ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಾಹನಗಳಿಂದ ಸಂಚಾರ ಸಮಸ್ಯೆ ಹಾಗೂ ಸಮಯ ವ್ಯರ್ಥವೂ ಆಗುತ್ತಿದೆ. ಸಂಚಾರ ದಟ್ಟಣೆ ನಿವಾರಿಸಲು ಮತ್ತು ನಗರಾಭಿವೃದ್ಧಿಗೆ ಬಲ ನೀಡಲು ಪೆರಿಫೆರಲ್ ರಿಂಗ್ ರಸ್ತೆ ಅನಿವಾರ್ಯವಾಗಿದೆ. ಈ ಅಗತ್ಯವನ್ನು ಮನಗಂಡು, ಜನವರಿ 2025ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಗಣಿಸಲಾಗುವುದು ಉತ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಮಂಡ್ಯ, ಹಾಸನ ಸೇರಿದಂತೆ ಹಲವು ನಗರಗಳು ರಿಂಗ್ ರಸ್ತೆ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟಿವೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಯೋಜಿತ ಪೆರಿಫೆರಲ್ ರಿಂಗ್ ರಸ್ತೆ ರಾಷ್ಟ್ರೀಯ ಹೆದ್ದಾರಿಗಳಾದ NH-50, NH-548B, NH-561A, NH-218 ಮತ್ತು ರಾಜ್ಯ ಹೆದ್ದಾರಿ SH-34 ಅನ್ನು ಪರಸ್ಪರ ಸಂಪರ್ಕಿಸಲಿವೆ. ಜಿಲ್ಲೆಯ ಅಭಿವೃದ್ಧಿಗೆ-ಆರ್ಥಿಕ ಬದಲಾವಣೆಗೆ ಪೆರಿಪೆರಲ್ ರಿಂಗ್ ರಸ್ತೆ ಯೋಜನೆಯು ಹೊಸ ಹೆಜ್ಜೆಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧನ್ಯವಾದಗಳು
ಡಾ. ಮಹಾಂತೇಶ ಬಿರಾದಾರ