ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಅದಕ್ಕಾಗಿ ಪಂಚಮಸಾಲಿ ನಡೆಗೆ ಶಿಗ್ಗಾಂವಿ ಕಡೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪಂಚಮಸಾಲಿ ಹೋರಾಟಕ್ಕೆ ಸಾತ್ ನೀಡಿಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ನೋವು ಆಗಿದೆ. ಇನ್ನು ಜೂನ್ 27 ಕ್ಕೆ ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಕಚೇರಿಯ ಎದುರು ಹೋರಾಟ ಆರಂಭ ಮಾಡುತ್ತೇವೆ. ಈ ಹಿನ್ನಲೆ ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನಮ್ಮ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಅಲ್ಲದೇ, ಮೀಸಲಾತಿ ಬಗ್ಗೆ ಜೂನ 27ರ ವರೆಗೆ ಸಿಎಂ ಬೊಮ್ಮಾಯಿ ತಿಳಿಸಬೇಕು. ಇಲ್ಲದೇ ಹೋದ್ರೇ ಹೋರಾಟ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅಲ್ಲದೇ, ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ನೆರವೇರಿಸಲಾಗುವುದು. ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿ ಆಭಾರ ಮನ್ನಣೆ ಮಾಡಲಾಗುವುದು. ಇಲ್ಲವೇ ಹೋರಾಟ ಮುಂದುವರೆಸಲಾಗುವುದು ಎಂದರು.