ವಿಜಯಪುರ: ದೇವರಿಗೆ ನೈವೇದ್ಯವಾಗಿ ಭಕ್ತರು, ಹೂವೂ, ಹಣ್ಣು, ಆಹಾರ ಪದಾರ್ಥ ನೀಡೋದು ಸಾಮಾನ್ಯವಾಗಿ ನಾವೇಲ್ಲ ನೋಡಿದ್ದೇವೆ. ಆದರೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತದೆ. ಜೊತೆಗೆ ಭಕ್ತರು ಸಹ ಮದ್ಯವನ್ನೆ ನೈವೇದ್ಯವಾಗಿ ಸೇವನೆ ಮಾಡುತ್ತಾರೆ. ತಲ ತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಬಬಲಾದಿ ಸದಾಶಿವನ ಜಾತ್ರೆಯಲ್ಲಿ ಮದ್ಯವೇ ನೈವೇದ್ಯವಾಗಿರುತ್ತದೆ. ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನೇ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ.
ಹೀಗಾಗಿ ಈ ಸದಾಶಿವನ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಹೇಳಲಾಗುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ. ಕರ್ನಾಟಕ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಬರುತ್ತಾರೆ. ಮಹಿಳೆಯರು ಕೂಡಾ ಇದನ್ನೇ ನೈವೇದ್ಯವಾಗಿ ಸ್ವೀಕರಿಸಿತ್ತಾರೆ. ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ. ವರ್ಷದ ಮಳೆ, ಬೆಳೆಗಳ ಬಗ್ಗೆಯೂ ಸಹ ನಿಖರವಾಗಿ ಹೇಳಿಕೆ ನೀಡುವುದರಿಂದ ರೈತರು ಇದೇ ಹೇಳಿಕೆಯನ್ನೇ ಆಧರಿಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸದಾಶಿವನ ಸನ್ನಿಧಾನಕ್ಕೆ ಆಗಮಿಸಿ ಯಾವುದಾದ್ರೂ ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಇಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್ ಗಳ ಮದ್ಯವನ್ನೇ ಸಮರ್ಪಿಸುತ್ತಾರೆ. ಸದಾಶಿವನ ಜಾತ್ರೆ ವೇಳೆಯೇ ದೇವಸ್ಥಾನದ ಆವರಣದಲ್ಲಿ ಪ್ರತಿ ರೈತನಿಗೂ ಬೊಗಸೆಯಷ್ಟು ಧವಸ-ಧಾನ್ಯಗಳನ್ನು ನೀಡಲಾಗುತ್ತದೆ. ಈ ಧಾನ್ಯವನ್ನು ರೈತರು ತಾವು ಬಿತ್ತನೆ ಮಾಡುವ ಬೀಜದೊಂದಿಗೆ ಸೇರಿಸಿ ಬಿತ್ತನೆ ಮಾಡಿದ್ರೆ ಆ ವರ್ಷದ ಬೆಳೆ ಭರ್ಜರಿಯಾಗಿ ಬರುತ್ತದಂತೆ. ಹೀಗಾಗಿ ಭಕ್ತರು ಸಹ ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸುತ್ತಿದ್ದಾರೆ. ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಐದು ದಿನಗಳ ವರೆಗೆ ನಡೆಯುವ ಜಾತ್ರೆ ವಿಶಿಷ್ಠ ಹಾಗೂ ವಿಭಿನ್ನತೆಯಿಂದ ಕೂಡಿರುತ್ತದೆ.