ವಿಜಯಪುರ: ಪತ್ನಿಯ ಶೀಲ ಶಂಕಿಸಿ ಆಕೆಯ ಕೊಲೆ ಮಾಡಿದ ಪತಿಗೆ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದೆ. ಮಲ್ಲಿಕಾರ್ಜುನ ಪವಾರ ಶಿಕ್ಷೆಗೊಳಗಾದವರು.
ವಿಜಯಪುರ ನಗರದ ಕಾಸಗೇರಿ ಕಾಲೋನಿಯಲ್ಲಿ ಸೋನಾಬಾಯಿ ಪವಾರನ್ನು 5-3-2019 ರಂದು ಮನೆಯಲ್ಲಿ ಹತ್ಯೆ ಮಾಡಿದ್ದನು. ಮೃತ ಸೋನಾಬಾಯಿ ಮೇಲೆ ಪತಿ ಮಲ್ಲಿಕಾರ್ಜುನ ಪದೇ ಪದೇ ಸಂಶಯಗೊಂಡು ಜಗಳವಾಡುತ್ತಿದ್ದನು. ಬೇರೆಯವರ ಜೊತೆಗೆ ಸಂಬಂಧ ಇದೆ ಎಂದು ಸಂಶಯಪಟ್ಟು ಪತ್ನಿ ಮಲಗಿದ್ದ ವೇಳೆ ಆಯುಧದಿಂದ ಹತ್ಯೆಗೈದಿದ್ದನು. ಈ ಸಂಬಂಧ ವಿಜಯಪುರ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಅಂದಿನ ಪಿಎಸ್ಐ ಆರೀಫ್ ಮುಶಾಪುರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಸುಭಾಷ್ ಸಂಕದ ಅವರು , ಆರೋಪಿ ಮಲ್ಲಿಕಾರ್ಜುನ ಪವಾರಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, ಹಣವನ್ನು ಮೃತಳ ಮಕ್ಕಳಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ 3ನೇ ಅಧಿಕ ಸರ್ಕಾರಿ ಅಭಿಯೋಜಕರಾದ ಬಿಡಿ ಬಾಗವಾನ್ ವಾದ ಮಂಡಿಸಿದ್ದರು.