ಬಾಗಲಕೋಟ: ಬೀಳಗಿ ಮತಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಆಗುತ್ತದೆ ಎಂದು ಸಚಿವ ಮುರುಘೇಶ ನಿರಾಣಿ ಹೇಳಿದರು. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಹಾಗೂ ನೂತನವಾಗಿ ನಿರ್ಮಿಸಿದ ರಥಗಳ ಲೋಕಾರ್ಪಣೆ ಸಮಾರಂಭಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿ ಮಾತನಾಡಿದರು. ಬಾಗಲಕೋಟ ಜಿಲ್ಲೆಗೆ ವಿಮಾನ ನಿಲ್ದಾಣ ಆದಷ್ಟು ಬೇಗ ಆಗುತ್ತದೆ. ವಿಮಾನ ನಿಲ್ದಾಣ ಆಗುವುದರಿಂದ ಉದ್ಯೋಗ ಸೇರಿದಂತೆ ವ್ಯಾಪಾರ ವಹಿವಾಟುದಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಬೀಳಗಿ ಮತಕ್ಷೇತ್ರ ಅಭಿವೃದ್ಧಿ ಆಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆ ಅಭಿವೃದ್ಧಿ ಆಗಿದೆ. ಆದ್ರೇ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ವಿರೋಧಿಗಳಿಗೆ ಕಿವಿ ಮಾತು ಹೇಳಿದರು.
ಕಬಡ್ಡಿ ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಎಲ್ಲರೂ ಭಾಗವಹಿಸಬೇಕು. ಕೇವಲ ಕಬಡ್ಡಿಗೆ ಮಾತ್ರ ಪ್ರೇರಣೆ ನೀಡಬಾರದು. ಇದರ ಜೊತೆಗೆ ಎಲ್ಲ ಕ್ರೀಡೆಯಲ್ಲೂ ಭಾಗವಹಿಸುವಂತೆ ಮನವಿ ಮಾಡಿದರು. ಅಲ್ಲದೇ, ಕೈಗಾರಿಕಾ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಅವರಿಗೆ 75% ಸಬ್ಸಿಡಿಗಳು ಇವೆ. ಅದಕ್ಕಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತಾವುಗಳು ತೊಡಗಿಕೊಂಡು ಉದ್ಯೋಗಗಳನ್ನು ಮಾಡಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಪಿಎಸ್ ಪೂಜಾರ ಮಾತನಾಡಿ, ಐತಿಹಾಸಿಕ ದೇವಸ್ಥಾನಗಳನ್ನು ನಾವು ಕಾಪಾಡಿಕೊಳ್ಳಬೇಕು. ಇದು ನಮ್ಮ ಪರಂಪರೆ ಆಗಿದೆ. ಅದಕ್ಕಾಗಿ ಬಸವೇಶ್ವರ ದೇವಸ್ಥಾನದಲ್ಲಿ ಮೊದಲ ಬಾರಿಗೆ ರಥಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು. ಸಚಿವ ನಿರಾಣಿ ಅಭಿವೃದ್ಧಿ ಹರಿಕಾರರು. ಅವರು ಕೈಗಾರಿಕಾ ಕ್ಷೇತ್ರದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿದ್ದಾವೆ ಎಂದರು.
ಈ ವೇಳೆ ಜಾನಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಬಂಡಿ, ಉಪಾಧ್ಯಕ್ಷ ಅಡಿವೇಪ್ಪ ಹಲ್ಲೂರ ಸೇರಿದಂತೆ ಸಮಸ್ತ ಜಾನಮಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.