ವಿಜಯಪುರ: ಉತ್ತರ ಕರ್ನಾಟಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಅಲ್ಲದೇ, ಬೆಳೆ ಹಾನಿಗೆ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದರು.
ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಿಯೇ ತೀರುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಇಂಡಿ ಜಿಲ್ಲೆ ಮಾಡುತ್ತೇನೆ.
ಜಿಲ್ಲೆ ಆಗದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು. ಕಾಂಗ್ರೆಸ್ ಸರ್ಕಾರ ರೈತ ಪರವಾಗಿತ್ತು. ಆದ್ರೇ, ಬಿಜೆಪಿ ಸರ್ಕಾರ ರೈತರ ನೋವಿಗೆ ಸ್ಪಂದಿಸುವಲ್ಲಿ ಸರ್ಕಾರ ಎಡವಿದೆ. ರೈತರ ನೋವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದರು.
ಜಿಲ್ಲಾ ಪಂಚಾಯತ,ತಾಲೂಕು ಪಂಚಾಯತ ಚುನಾವಣೆ ನಡೆಸುವಲ್ಲಿ ಸರ್ಕಾರದ ಹಿಂದೇಟು ಆಗಿದೆ. ವಿಜಯಪುರ ಹಾಗೂ ಮಂಡ್ಯ ಕಡೆಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ಇನ್ನೂ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುವುದು ಸರಿಯಲ್ಲ. ಅದಕ್ಕಾಗಿ ವಿಜಯಪುರ ಜಿಲ್ಲೆಗೆ ಫೆಬ್ರವರಿ 11ಕ್ಕೆ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ ಆಗಲಿದೆ. ಅಂದು ಸಿಂದಗಿ, ಇಂಡಿ, ನಾಗಠಾಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ನಡೆಯಲಿದೆ. ತದನಂತರ ಉಳಿದ ಮತಕ್ಷೇತ್ರಗಳಲ್ಲಿ 21, 22 ಪ್ರಜಾಧ್ವನಿ ಬಸ್ ಯಾತ್ರೆ ಮಾಜಿ ಸಿಎ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ನಡೆಯಲಿದೆ ಎಂದರು.