ವಿಜಯಪುರ: ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿ, ಮತದಾನ ಪ್ರಮಾಣ ಹೆಚ್ಚಿಸಲು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮತದಾರರ ಸಾಕ್ಷರತಾ ಸಂಘಗಳ ತಾಲೂಕಾ ಮಟ್ಟದ ತರಬೇತುದಾರರಿಗೆ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯ್ದ ಪ್ರೌಢ ಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ಪದವಿ ಕಾಲೇಜುಗಳ ಉಪನ್ಯಾಸಕರು, ವಿಶ್ವ ವಿದ್ಯಾನಿಲಯಗಳ ಪ್ರಾಧ್ಯಾಪಕರು, ತಾಂತ್ರಿಕ ಶಿಕ್ಷಣ ವಿಭಾಗದ ಉಪನ್ಯಾಸಕರಿಗೆ “ಮತದಾರರ ಸಾಕ್ಷರತಾ ಸಂಘಗಳ ತಾಲೂಕಾ ಮಟ್ಟದ ತರಬೇತುದಾರರ ತರಬೇತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ಮತದಾನ ಇರುವ ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಮತದಾನದ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕು, ಕಳೆದ ವಿಧಾನ ಸಭಾ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಕನಿಷ್ಠ ಶೇ.10-15 ರಷ್ಟು ಮತದಾನದ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗುವಂತೆ ಕ್ರಮ ಕೈಗೊಳ್ಳಬೇಕು.ಎಲ್ಲ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾರರ ಮನವೊಲಿಸಿ, ಮತದಾನ ಪ್ರಮಾಣ ಹೆಚ್ಚಿಸುವುದರ ಮೂಲಕ ಚುನಾವಣಾ ಪ್ರಕ್ರಿಯೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ .ನಿಂಗಪ್ಪ ಗೋಠೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಉಮೇಶ ಶಿರಹಟ್ಟಿಮಠ, ವಿಜಯಪುರದ ಪ್ರಾಂಶುಪಾಲರಾದ (ಡಯಟ್) ಶ್ರೀಮತಿ ಶಾಹಿರಾಬಾನು ಖಾನ್, ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೊರಬು, ವಿಜಯಪುರ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.