ಬಾಗಲಕೋಟೆ: ಆ ಬಸವ ಲಕ್ಷ ಲಕ್ಷ ಹಣಕ್ಕೆ ಮಾರಾಟ ಆಗಿದೆ. ಹೌದು..! ಸೋಲಿಲ್ಲದ ಸರ್ದಾರ್ ಎಂದೇ ಖ್ಯಾತಿ ಪಡೆದಿರುವ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಕಿಲಾರಿ ಎತ್ತು ಬರೋಬ್ಬರಿ 14 ಲಕ್ಷ 51 ಸಾವಿರಕ್ಕೆ ಮಾರಾಟ ಮಾರಾಟವಾಗಿದೆ. ಗೆಲುವಿನ ಸರ್ದಾರ ಎಂದೇ ಕರೆಸಿಕೊಂಡಿರುವ ಲಕ್ಷ್ಯಾ ಎತ್ತು ದಾಖಲೆಯ ಹಣಕ್ಕೆ ಮಾರಾಟವಾಗಿದೆ. ಶಿವಲಿಂಗ ಹಾಗೂ ಮಾಯಪ್ಪ ದೊಡಮನಿ ಸಹೋದರರಿಗೆ ಸೇರಿದ್ದ ಎತ್ತನ್ನು ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಖರೀದಿ ಮಾಡಿದ್ದಾರೆ. 9 ತಿಂಗಳ ಹಿಂದೆ ಢವಳೇಶ್ವರದಲ್ಲಿ 5 ಲಕ್ಷ 50 ಸಾವಿರ ಕೊಟ್ಟು ಈ ಎತ್ತನ್ನು ಖರೀದಿ ಮಾಡಲಾಗಿತ್ತು. 9 ತಿಂಗಳಲ್ಲಿ ವಿವಿಧೆಡೆ ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಲಕ್ಷ್ಯಾ 3 ಲಕ್ಷ ರೂಪಾಯಿ ಗೆದ್ದಿತ್ತು.