ವಿಜಯಪುರ: ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ ಸಿಕ್ಕ ಮಾತ್ರಕ್ಕೆ ಜನರ ಬೇಡಿಕೆ ಈಡೇರಲ್ಲ. ಹೀಗಾಗಿ ಯಾವುದೇ ಅಪ ಪ್ರಚಾರಕ್ಕೆ ಅವಕಾಶ ಕೊಡಬಾರದು. ಇನ್ನು ಅನ್ಯ ಕ್ಷೇತ್ರಕ್ಕೆ ಉಸ್ತುವಾರಿ ನೀಡಿದ್ದರಿಂದ ನಗರ ಕ್ಣೇತ್ರದಿಂದ ಟಿಕೆಟ್ ಸಿಗಲ್ಲ ಎಂಬುದು ಶುದ್ಧ ಸುಳ್ಳು. ನಗರ ಕ್ಷೇತ್ರದಿಂದ ನಾನು ಪ್ರಬಲ ಆಕಾಂಕ್ಷಿ. ಎರಡು ಸಲ ನಗರ ಕ್ಷೇತ್ರದಿಂದ ಗೆದ್ದಿದ್ದೇನೆ. ಈ ಬಾರಿಯೂ ಸ್ಪರ್ಧೆಗೆ ಹಂಬಲಿಸಿದ್ದು ಪಕ್ಷ ಅವಕಾಶ ನೀಡುವ ಅವಕಾಶ ಇದೆ ಎಂದರು. ಸಚಿಚ ಮುರುಗೇಶ ನಿರಾಣಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರ ಮಗ ನನಗೆ ನಿಲ್ಲಿಸಿ ಗೆಲ್ಲುವ ವಿಚಾರದಲ್ಲಿ ಇದ್ದಾರೆ. ಪಕ್ಷಕ್ಕೆ ಸದಾ ಅವರ ಬೆಂಬಲ ಇದ್ದೇ ಇರಲಿದೆ. ಅವರೆಲ್ಲ ನನಗೆ ಆತ್ಮೀಯರು. ವೈಯಕ್ತಿಕ ಸಂಬಂಧಗಳು ಇವೆ.
ಹೀಗಾಗಿ ನಾನು ಅಭ್ಯರ್ಥಿ ಆದರೆ ನನ್ನನ್ನು ಗೆಲ್ಲಿಸಲು ಹೆಚ್ಚಿನ ಪ್ರಯತ್ನ ಮಾಡುವ ವಿಶ್ವಾಸ ಇದೆ. ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕೇಳಿದ್ದೇನೆ. ಈವರೆಗೂ ಟಿಕೆಟ್ ಅಂತಿಮಗೊಂಡಿಲ್ಲ. ಆದರೆ ಕಾರಜೋಳರು ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ಇನ್ನೂ ಯಾತ್ರೆ, ಸಮಾವೇಶ ನಡೆಸುವುದರಲ್ಲೇ ವರಿಷ್ಠರು ತಲ್ಲೀನರಾಗಿದ್ದಾರೆ. ಹೀಗಾಗಿ ಕಾರಜೋಳ ಅವರು ಯಾಕೆ ಹಾಗೆ ಹೇಳಿದರು ಗೊತ್ತಿಲ್ಲ. ಕಾರಜೋಳ ಅವರು ಹಾಗೆ ಹೇಳಿದ್ದು ನನಗೂ ನಿರಾಶೆಯಾಗಿದೆ. ಇದೇ ಕಾರಣಕ್ಕೆ ವರಿಷ್ಠರಿಗೆ ಕೇಳಲು ಆಲಮಟ್ಟಿಗೆ ಹೋಗಿದ್ದೆ. ಆದರೆ ವರಿಷ್ಠರು ಹಾಗೆಲ್ಲ ಅಂತಿಮಗೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎಂದರು.