ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹಾಗೂ ಸದಸ್ಯರು ನಗರದ ವಿಡಿಎ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ವಿಡಿಎ ಅಧ್ಯಕ್ಷರಾಗಿ ಪರಶುರಾಮಸಿಂಗ್ ರಜಪೂತ ಹಾಗೂ ಸದಸ್ಯರಾಗಿ ಅನಿಲ ಸಬರದ, ಮಡಿವಾಳಪ್ಪ ಯಾಳವಾರ, ವೆಂಕಟೇಶ ಕುಲಕರ್ಣಿ, ಲಕ್ಷ್ಮೀ ಕನ್ನೊಳ್ಳಿ, ರೇವಣಸಿದ್ದಪ್ಪ ಜಿರಲಿ ಅವರು ಅಧಿಕಾರ ಸ್ವೀಕರಿಸಿದರು.
ವಿಡಿಎ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಚೇರಿ ಹೊರ ಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಅಭಿಮಾನಿಗಳು ಸಂಭ್ರಮಿಸಿದರು. ನೂತನ ಪದಾಧಿಕಾರಿಗಳನ್ನು ಹಲವರು ಸನ್ಮಾನಿಸಿದರು. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರಾದ ಎಂ.ಎಸ್.ರುದ್ರಗೌಡರು ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ವಿಡಿಎ ಅಧಿಕಾರಿಗಳು, ಸಿಬ್ಬಂದಿ ಇದ್ದರು.