ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾಗಿದ್ದು ಇತನನ್ನು ಕೊಲೆ ಮಾಡಿದ ಇಬ್ಬ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ, ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಧಾನಿ ಲಾಡ್ಜ್ ರೂಮ್ ನಂಬರ 114 ನಲ್ಲಿ ಎರಡು ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವದು ಪತ್ತೆಯಾಗಿದೆ. ಇಂದ್ರಕುಮಾರ ಎಂಬವನು ಇದೇ ಮಾರ್ಚ್ 22ರಂದು ಲಾಡ್ಜ್ ಆಗಮಿಸಿ ಆಧಾರ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದು ಕೊಂಡಿದ್ದನು. ನಂತರ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ್ ರೂಮ್ ಬಾಗಿಲು ಸಹ ತೆರೆದಿರಲಿಲ್ಲ. ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ರೂಮ್ ನಿಂದ ಕೆಟ್ಟ ವಾಸನೆ ಬರಲು ಆರಂಭಿಸಿದಾಗ ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ತೆಗೆದಾಗ ಕೊಲೆ ನಡೆದಿರುವದು ಬೆಳಕಿಗೆ ಬಂದಿದೆ. ಇಂದ್ರ ಕುಮಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಮೇಲೆ ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಶವ ಬಿದ್ದಿರುವದು ಪತ್ತೆಯಾಗಿದೆ.
ಇದರ ಜತೆ ರೂಮ್ ನಲ್ಲಿ ಒಂದು ಬೈಕ್ ಕೀ ಪತ್ತೆಯಾಗಿದೆ. ಆ ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಿಜಿಸ್ಟರ್ ಹೊಂದಿದೆ. ಆ ವ್ಯಕ್ತಿ ಈ ಇಬ್ಬರ ಸಾವಿಗೆ ಸಂಬಂಧ ಇರಬಹುದಾ? ಎನ್ನುವದು ಪತ್ತೆಯಾಗಬೇಕಾಗಿದೆ. ಇದು ಒಂದು ಕೊಲೆ ಹಾಗೂ ಇನ್ನೊಂದು ಆತ್ಮಹತ್ಯೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಸ್ಥಳಕ್ಕೆ ಖುದ್ದು ಎಸ್ಪಿ ಆನಂದಕುಮಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಸದ್ಯ ಇವರಿಬ್ಬರ ಸಾವಿನ ನಿಗೂಢತೆ ಭದಿಸಲು ತನಿಖೆ ಆರಂಭಿಸಿದ್ದಾರೆ. ಸಾವನ್ನಪ್ಪಿರುವ ಇಂದ್ರಕುಮಾರ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಸಾವಿನ ರಹಸ್ಯ ಅವರು ಬಿಚ್ಚಿಟ್ಟ ಮೇಲೆ ಮುಂದಿನ ತನಿಖೆ ನಡೆಯಲಿದೆ. ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.