ವಿಜಯಪುರ: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಸುಗಮ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಸಲು ಅನುಕೂಲವಾಗುವಂತೆ ತರಬೇತಿ ನಿರ್ವಹಣಾ ನೋಡಲ್ ಅಧಿಕಾರಿಗಳಾದ ಶಂಕರಗೌಡ ಸೋಮನಾಳ ಅವರು ಇವಿಎಂ ನಿರ್ವಹಣೆ ಕುರಿತು ನಿಯೋಜಿಸಿದ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಸ್ಥಾಪಿಸಲಾದ ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಕೇಂದ್ರದಲ್ಲಿ ಇವಿಎಂ ನಿರ್ವಹಣೆ, ಇವಿಎಂ ಮಹತ್ವ ಕುರಿತು ಚುನಾವಣಾ ತರಬೇತಿ ನೀಡಿದ ಅವರು, ಚುನಾವಣಾ ಕರ್ತವ್ಯ ಅತ್ಯಂತ ಜವಾಬ್ದಾರಿಯುತವಾಗಿದ್ದು, ಇವಿಎಂ ಕುರಿತು ಸಂಬಂಧಿಸಿದ ಕಾರ್ಯನಿರ್ವಹಣೆಗೆ ಎಲ್ಲ ಅಗತ್ಯ ಮಾಹಿತಿ ಪಡೆದುಕೊಂಡು ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು. ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಸೆಲ್ ತರಬೇತಿ: ಈ ಸಂದರ್ಭದಲ್ಲಿ ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಸಮಿತಿ ಸದಸ್ಯರಿಗೆ ತರಬೇತಿ ನೀಡಿ, ಸಮಿತಿ ಸದಸ್ಯರು ಯಾವುದೇ ಒತ್ತಡಕ್ಕೆ ಒಳಗಾಗದೇ, ಸಮಚಿತ್ತದಿಂದ ಕಾರ್ಯನಿರ್ವಹಿಸುವ ಮೂಲಕ ದೈನಂದಿನ ಸುದ್ದಿ, ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ವಿವಿಧ ಸುದ್ದಿ, ಲೇಖನಗಳನ್ನು ಸಂಗ್ರಹಿಸಿ ತೀವ್ರ ನಿಗಾ ವಹಿಸಬೇಕು. ಕಾಸಿಗಾಗಿ ಸುದ್ದಿ, ಮತದಾರರಿಗೆ ಪ್ರಭಾವ ಬೀರುವ ಸುದ್ದಿಗಳ ಮೇಲೆ, ವ್ಯಕ್ತಿ ವೈಭವೀಕರಿಸುವ ಸುದ್ದಿ ಪ್ರಸಾರದ ಮೇಲೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ನ್ಯಾಯಸಮ್ಮತ ಚುನಾವಣೆಗೆ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು. ತರಬೇತಿಯಲ್ಲಿ ಇವಿಎಂ ನಿರ್ವಹಣಾ ನೋಡಲ್ ಅಧಿಕಾರಿಗಳಾದ ಎಂ.ಎಲ್ ಪಡಗಾನೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಕೋಶದ ಅಧ್ಯಕ್ಷರಾದ ರಾಮನಗೌಡ ಕನ್ನೊಳ್ಳಿ, ಸದಸ್ಯರಾದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.