ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ 36 ಸಾವಿರ ದಂಡ ವಿಧಿಸಿ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ. ಧಾರವಾಡದ ಆನಂದ ಹಣಮಂತಪ್ಪ ನಾಯ್ಕೋಡಿ, ಹಣಮಂತಪ್ಪ ಸಂಗಪ್ಪ ನಾಯ್ಕೋಡಿ ಹಾಗೂ ಶಿವಾನಂದ ಗೋಪಾಲ ದೊಡ್ಡ ಅಂಬಿಗೇರ ಶಿಕ್ಷೆಗೊಳಗಾದವರು. ಶಾಲಿನಿ ಆನಂದ ನಾಯ್ಕೋಡಿಯ ಗಂಡನ ಮನೆಯ ಕಡೆಯವರು. ಆದರೆ ಇವರು ಶಾಲಿನಿಗೆ ಇಲ್ಲ-ಸಲ್ಲದ ಆರೋಪ ಮಾಡಿ, ಆಕೆಯನ್ನು ತವರಿಗೆ ಕಳುಹಿಸಿದ್ದರು. ಇದರಿಂದ ಪರಿತ್ಯಕ್ತ ಮಹಿಳೆ ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಪೋಟಗಿ ದಾವೆ ಹೂಡಿದ್ದರು. ಇದರ ವಿಚಾರಣೆಗೆ 2017 ರ ಡಿಸೆಂಬರ್ 30 ರಂದು ನ್ಯಾಯಾಲಯಕ್ಕೆ ಆಗಮಿಸಿದ್ದ ಆರೋಪಿಗಳು, ಶಾಲಿನಿ ಮೆಲೆ ನ್ಯಾಯಾಲಯದ ಆವರಣದಲ್ಲಿ ಹಲ್ಲೆಗೆ ಯತ್ನಿಸಿ, ಆಕೆಯನ್ನು ಸಾಯಿಸಲಿಕ್ಕೆ ಯತ್ನಿಸಿದ್ದರು ಎಂದು ಜಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಾಲವಾಡೆ ಅವರು, ಸಾಕ್ಷಿ ಪರಿಶೀಲಿಸಿ,ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಎಸ್.ಎಚ್. ಹಕೀಮ ವಾದ ಮಂಡಿಸಿದ್ದರು.