ವಿಜಯಪುರ: ಪತ್ನಿಗೆ ಯುವಕನೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಯುವಕನ ಹತ್ಯೆಗೈದಿದ್ದ ಮೂವರಿಗೆ ವಿಜಯಪುರ ಜಿಲ್ಲಾ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದೆ. ಜೆಟ್ಟೆಪ್ಪ ಬಿಸನಾಳ, ಶಿವಪ್ಪ ಬಿಸನಾಳ, ಮುತ್ತಪ್ಪ ಬಿಸನಾಳ ಶಿಕ್ಷೆಗೊಳಗಾದವರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಂಥನಾಳ ಗ್ರಾಮದಲ್ಲಿ ಸಚಿನ ಅಗಟಗಿನ್ನು ಮೂವರು ತಿಪ್ಪೆ ಕುಣಿಯಲ್ಲಿ 19-10-2019 ರಂದು ಹತ್ಯೆ ಮಾಡಿದ್ದರು. ಜೆಟ್ಟೆಪ್ಪ ಬಿಸನಾಳನ ಹೆಂಡತಿಯ ಜೊತೆಗೆ ಸಚಿನ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಹಲ್ಲೆಗೈದು ಹತ್ಯೆ ಮಾಡಿದ್ದರು. ಪ್ರಕರಣದ ತನಿಖೆಗೊಂಡ ಸಿಂದಗಿ ಸಿಪಿಐ ಸತೀಶಕುಮಾರ ಕಾಂಬ್ಳೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಸುಭಾಷ್ ಸಂಕದ ಅವರು, ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ
ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 3ನೇ ಅಧಿಕ ಸರ್ಕಾರಿ ಅಭಿಯೋಜಕರಾದ ಬಿಡಿ ಬಾಗವಾನ್ ವಾದ ಮಂಡಿಸಿದ್ದರು.