ವಿಜಯಪುರ: ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸಂಜೆ ಬೃಹತ್ ರೋಡ್ ಷೋ ನಡೆಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ ಪಾಟೀಲ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ದಿ.23 ರಂದು ಕೂಡಲಸಂಗಮದಿಂದ ಸಂಜೆ 5 ಗಂಟೆಗೆ ವಿಜಯಪುರ ನಗರಕ್ಕೆ ಭೇಟಿ ನೀಡಲಿದ್ದು, ವಿಜಯಪುರ ನಗರದಲ್ಲಿ ಶ್ರೀ ಶೀವಾಜಿ ವೃತ್ತದಿಂದ ಬೃಹತ್ ರೋಡ್ ಷೋ ನಡೆಸಲಿದ್ದಾರೆ. ಅಲ್ಲಿಂದ ಆರಂಭವಾಗುವ ರೋಡ್ ಷೋ ಗಾಂಧೀ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ರೋಡ್ ಷೋ ನಡೆಯಲಿದ್ದು, ಭಕ್ತ ಕನಕದಾಸ ವೃತ್ತಕ್ಕೆ ತಲುಪಿ ಈ ರೋಡ್ ಷೋ ಸಂಪನ್ನಗೊಳ್ಳಲಿದ್ದು, ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ರಾಹುಲ್ ಗಾಂಧೀ ಮಾತನಾಡಲಿದ್ದು, ವಿಜಯಪುರದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂದು ವಿವರಿಸಿದರು. ಸರಿಸುಮಾರು 1 ಲಕ್ಷಕ್ಕೂ ಅಧಿಕ ಜನರು ಈ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಕೂಡಲಸಂಗಮದಲ್ಲಿ ಬಸವ ಜಯಂತಿಯಲ್ಲಿ ರಾಹುಲ್ ಭಾಗಿ ಎಐಸಿಸಿ ನಾಯಕ ರಾಹುಲ್ ಗಾಂಧೀ ದಿ.23 ರಂದು ಬೆಳಿಗ್ಗೆ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪಕ್ಕೆ ನಮನ ಸಲ್ಲಿಸಲಿದ್ದು, ನಂತರ ಬಸವ ಭವನದಲ್ಲಿ ಆಯೋಜಿಸಲಾಗಿರುವ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೂಡಲಸAಗಮದಲ್ಲಿ ನಡೆಯಲಿರುವ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಬಸವ ಉತ್ಸವ ಸಮಿತಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವ ಜಯಂತಿ ಉತ್ಸವದಲ್ಲಿ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ಧರಾಮ ಮಹಾಸ್ವಾಮೀಜಿ ಅವರು ಬಸವಾದಿ ಶರಣರು, ಬಸವ ತತ್ವದ ಬಗ್ಗೆ ಮಾತನಾಡಲಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಜಗದ್ಗುರುಗಳು, ಭಾಲ್ಕಿ ಜಗದ್ಗುರುಗಳು ಸೇರಿದಂತೆ ಹಲವಾರು ಮಠಾಧೀಶರಿಗೆ ಆಹ್ವಾನ ನೀಡಲಾಗಿದೆ ಎಂದರು.
ನಾಳೆ ಬೆಳಿಗ್ಗೆ ಹೈದರಾಬಾದ್ ಮೂಲಕ ಹುಬ್ಬಳ್ಳಿಗೆ ತಲುಪಿ ಅಲ್ಲಿಂದ 11.30ಕ್ಕೆ ಕೂಡಲಸಂಗಮಕ್ಕೆ ರಾಹುಲ್ ಗಾಂಧೀ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ, ನಂತರ ಕೂಡಲಸಂಗಮದ ಐಕ್ಯಮಂಟಪಕ್ಕೆ ನಮನ ಸಲ್ಲಿಸಲಿದ್ದು, ನಂತರ 1.30 ರವರೆಗೆ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ನಂತರ ಜನಸಾಮಾನ್ಯರ ಸಮ್ಮುಖದಲ್ಲಿಯೇ ದಾಸೋಹ ಭವನದಲ್ಲಿ ದಾಸೋಹ ಸ್ವೀಕರಿಸುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಪಾಟೀಲ ತಿಳಿಸಿದರು.
ಇದು ಸಂಪೂರ್ಣ ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಯಾವ ಪಕ್ಷದ ಬ್ಯಾನರ್ ಅಲ್ಲಿರುವುದಿಲ್ಲ ಎಂದರು.
ದಿ.23 ಮಹಾತ್ಮಾ ಬಸವೇಶ್ವರರು ಜನ್ಮತಾಳಿದ ಪವಿತ್ರ ದಿನ, ಬಸವೇಶ್ವರರು 12 ನೇ ಶತಮಾನದಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನ, ಜಗತ್ತಿನ ಪ್ರಥಮ ಪಾರ್ಲಿಮೆಂಟ್ ರೂವಾರಿ. ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದವರು ಅಣ್ಣ ಬಸವಣ್ಣನವರು.
ಮೌಢ್ಯಗಳನ್ನು ಬದಿಗೊತ್ತಿ ಕಾರ್ಲಮಾರ್ಕ್ಸ್ಗಿಂತಲೂ ಎಷ್ಟೋ ಶತಮಾನಗಳ ಮುಂಚೆ ಕಾಯಕದ ಸ್ವಾಭಿಮಾನ ಹಾಗೂ ದಾಸೋಹದ ತತ್ವ ಸಾರಿದವರು ಅಣ್ಣ ಬಸವಣ್ಣವರು ಎಂದು ವಿವರಿಸಿದರು.
ಲಿಂಗಾಯತರು ಮರಳಿ ಮನೆಗೆ ಬರುತ್ತಿದ್ದಾರೆ…
ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ಗಾಬರಿಯಾಗಿದ್ದು, ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ಬಿಜೆಪಿ ದಮನ ಮಾಡುತ್ತಿದೆ, ಈಗ ವಿರೇಂದ್ರ ಪಾಟೀಲರ ಹೆಸರನ್ನು ಪ್ರಸ್ತಾಪಿಸುತ್ತಿದೆ, ವಿರೇಂದ್ರ ಪಾಟೀಲರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು, ಮುಖ್ಯಮಂತ್ರಿಗಳಿಗೆ ಕಾರ್ಯನಿರ್ವಹಿಸಲು ಅವರಿಗೆ ತೊಂದರೆಯಾದ ಕಾರಣ ರಾಜ್ಯದ ಹಿತದೃಷ್ಟಿಯಿಂದ ಅವರನ್ನು ಬದಲಾಯಿಸಲಾಯಿತು, ಆದರೆ ಯಡಿಯೂರಪ್ಪನವರಿಗೆ ಯಾವ ಸಮಸ್ಯೆಯೂ ಇರಲಿಲ್ಲ, ಆಪರೇಷನ್ ಕಮಲ ಮಾಡಿಸಲು ಯಡಿಯೂರಪ್ಪನವರಿಗೆ ಪ್ರೋತ್ಸಾಹಿಸಿ ಅವರಿಗೆ ಕೆಟ್ಟ ಹೆಸರು ತಂದು ನಂತರ ಅವರನ್ನು ಕೈ ಬಿಡಲಾಯಿತು. ಒಬ್ಬ ಲಿಂಗಾಯತ ಹಿರಿಯ ಮುತ್ಸದ್ಧಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಹಿಡನ್ ಅಜೆಂಡಾ ಇರಿಸಿಕೊಂಡಿದೆ. ಆಗಿನ ಪರಿಸ್ಥಿತಿಗೆ ಹೆದರಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು.
ಜಗದೀಶ ಶೆಟ್ಟರ್, ಲಕ್ಷö್ಮಣ ಸವದಿಗೆ ಆಗಿರುವ ಪರಿಸ್ಥಿತಿ ಬಸವರಾಜ ಬೊಮ್ಮಾಯಿ ಅವರಿಗೂ ಬರಲಿದೆ, ಬಿಜೆಪಿ ಹಿಡನ್ ಅಜೆಂಡಾ ಈಗ ಸ್ಪಷ್ಟವಾಗುತ್ತಾ ಸಾಗಿದೆ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ, ಎಐಸಿಸಿಯಿಂದ ವೀಕ್ಷಕರು ಆಗಮಿಸುತ್ತಾರೆ, ಎಲ್ಲ ಶಾಸಕರ ಒಟ್ಟಾಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುತ್ತಾ ಬರಲಾಗುತ್ತಿದೆ, ಈ ಸಂಪ್ರದಾಯ ಜನರಿಗೂ ಗೊತ್ತಿದೆ, ಆದರೂ ಸಹ ಬಿಜೆಪಿ ಈ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಬಿಜೆಪಿ ಹಿಡನ್ ಅಜೆಂಡಾ ಬಗ್ಗೆ ಲಿಂಗಾಯತರಿಗೆ ಅರಿವಾಗಿದೆ ಎಂದರು. ನಮ್ಮ ಹೈಕಮಾಂಡ್ ಬಯಸಿದರೆ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಸಿದ್ಧರಾಮಯ್ಯ, ಡಿ.ಕೆ. ಶೀವಕುಮಾರ, ಡಾ.ಪರಮೇಶ್ವರ, ನಾನು, ಕೃಷ್ಣ ಭೈರೇಗೌಡ ಹೀಗೆ ಅನೇಕ ಸಮರ್ಥ ನಾಯಕರಿದ್ದಾರೆ, ನಾನು ಸಹ ಒಬ್ಬ ಸಮರ್ಥ ನಾಯಕ ಎಂದು ಹೇಳಬಲ್ಲೆ, ಹೈಕಮಾಂಡ್ ಬಯಸಿದರೆ ನಾನೂ ಆಗಬಹುದು ಎಂದರು. ಮಹಾತ್ಮಾ ಗಾಂಧೀಜಿ, ಇಂದಿರಾಗಾAಧೀ, ರಾಜೀವ ಗಾಂಧೀ ಅವರು ಅಲಂಕರಿಸಿದ ಹುದ್ದೆಯಲ್ಲಿ ಖರ್ಗೆಜಿ ಅವರು ಇದ್ದಾರೆ, ಅವರನ್ನು ಪ್ರಧಾನಮಂತ್ರಿ ಆಗಬಹುದು ಅಷ್ಟು ದೊಡ್ಡ ಹುದ್ದೆಯಲ್ಲಿ ಅವರು ಇದ್ದಾರೆ, ಅವರಿಗೆ ಮುಖ್ಯಮಂತ್ರಿ ಸಣ್ಣ ಸ್ಥಾನ, ಆದರೂ ಸಹ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.