ವಿಜಯಪುರ: ಲಿಂಗಾಯತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಿಮ್ಮ ಹಣೆ ಬರಹಕ್ಕೆ ಮೇಕೆದಾಟು ಯೋಜನೆ ಮಾಡಿಕೊಳ್ಳಲಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಸಿದ್ರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ, ವಯಕ್ತಿಕವಾಗಿ ಒಬ್ಬರಿಗೆ ಮಾತಾಡಬೇಕು. ಅದು ಬಿಟ್ಟು ಎಲ್ಲಾ ಲಿಂಗಾಯತ ಸಿಎಂ ರು ಬ್ರಷ್ಟರು ಎಂಬುದು ಎಷ್ಟು ಸರಿ. ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಹೋದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂದರು. ಕಾಂಗ್ರೆಸ್ನಲ್ಲಿ ತಾಕತ್, ಧಮ್ ಇದ್ರೆ ಇನ್ನೊಮ್ಮೆ ಅಂದು ನೋಡಿ ಎಂದು ಡಿಕೆಶಿಗೆ ಸವಾಲ್ ಹಾಕಿದರು.
ಅಲ್ಲದೇ, ಮೇ 10ರಂದು ಕಾಂಗ್ರೆಸ್ನ ಉಳಿದಿರುವ ಒಂದೇ ಒಂದು ಕೊನೆಯ ಮೊಳೆ ಹೊಡಿತಾರೆ. ವಿಜಯಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ವಾಗತ ಮಾಡ್ತೇನಿ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ. ರಾಹುಲ್ ಗಾಂಧಿ ಅವರು ಬಿಜೆಪಿ ಸ್ಟಾರ್ ಕ್ಯಾಂಪೇನರ್ ಇದ್ದಂಗೆ ಎಂದು ಲೇವಡಿ ಮಾಡಿದರು. ಮೊದಲು 15 ಸಾವಿರ ಲೀಡ್ ನಾ ಬರ್ತೆನೆ ಅಂದುಕೊಂಡಿದ್ದೆ. ಈಗ ರಾಹುಲ್ ಗಾಂಧಿ ಬಂದ್ರೆ ನಾನು 50 ಸಾವಿರ ಲೀಡ್ ಬರ್ತೆನೆ. ಅಲ್ಲದೇ, ಏಪ್ರಿಲ್ 29ಎಂದು ಪ್ರಧಾನಿ ಮೋದಿ ವಿಜಯಪುರಕ್ಕೆ ಬರ್ತಾರೆ. ಅಂದು ಮದ್ಯಾಹ್ನ 2ಗಂಟೆಗೆ ವಿಜಯಪುರದಲ್ಲಿ ಪ್ರಧಾನಿ ಕಾರ್ಯಕ್ರಮ ಇದೆ. ಮೋದಿ ಬಂದ ಮೇಲೆ ಮತ್ತೆ 30ರಿಂದ 40 ಸೀಟ್ ಹೆಚ್ಚಿಗೆ ಬರುತ್ತವೆ ಎಂದರು.