ವಿಜಯಪುರ: ವಿಜಯಪುರ: ವೀರಶೈವ ಲಿಂಗಾಯತ ಸಮಾಜದಲ್ಲಿ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೆಳೆ ಬೇಸಿಕೊಳ್ಳಲು ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಕ್ಕೆ ಬರಬಹುದು ಎಂದು ತಿಳಿದುಕೊಂಡಿದೆ, ಆದರೆ ಈಗ ಎಲ್ಲ ಸಮುದಾಯದ ಜನ ಬಿಜೆಪಿ ಪರ ಇದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಆರೋಪಿಸಿದರು. ಜಿಲ್ಲೆಯ ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ ಪರ ಕೊಲ್ಹಾರ ದಲ್ಲಿ ಚುನಾವಣಾ ಪ್ರಚಾರದ ರೋಡ ಶೋ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯಲು ಹೋದವರು ಇದೇ ಕಾಂಗ್ರೆಸ್ ನವರು ಮತ್ತೊಮ್ಮೆ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತರನ್ನು ಪ್ರಯತ್ನಿಸಿದೆ ಆದರೆ ಆಗಲಿಲ್ಲ ಎಂದರು.
ನಿನ್ನೆ ರಾಹುಲ್ ಗಾಂಧಿ ಪ್ರಾಯಶ್ಚಿತ್ತ ಎನ್ನುವಂತೆ ಕೂಡಲಸಂಗಮಕ್ಕೆ ಹೋಗಿ ಬಸವಣ್ಣನವರ ಐಕ್ಯ ಮಂಟಪದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಕನಿಷ್ಟ 130-140 ಸ್ಥಾನ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಲ್ಹಾರದಲ್ಲಿ ಬಿಸಿಲನ್ನು ಲೆಕ್ಕಿಸದೆ ಬೆಳ್ಳುಬ್ಬಿ ರೋಡ ಶೋದಲ್ಲಿ ಜನ ಪಾಲ್ಗೊಂಡಿದ್ದಾರೆ. ನಿಮ್ಮ ಉತ್ಸಾಹ ನೋಡಿದ್ರೆ ಬೆಳ್ಳುಬ್ಬಿ ಗೆದ್ದು ಬರೋದು ಗ್ಯಾರಂಟಿ ಎಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವು ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ ಈ ಬಾರಿ ಬೆಳ್ಳುಬ್ಬಿ ಗೆಲುವು ಗ್ಯಾರಂಟಿ ಜನ ಮೇ 10 ರಂದು ಬಿಜೆಪಿಗೆ ಮತಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ರೋಡ ಶೋ: ಇದಕ್ಕೂ ಮುಂಚೆ ಕೊಲ್ಹಾರ ದಲ್ಲಿ ವಿಜೇಂದ್ರ ರೋಡ ಶೋ ನಡೆಸಿದರು. ದಿಂಗಾಲೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತ ಮೂಲಕ ಪಟ್ಟಣದ ವಿವಿಧೆಡೆ ತೆರೆದ ವಾಹನದಲ್ಲಿ ಸಂಚರಿಸಿದರು. ಈ ವೇಳೆ ಕಾರ್ಯಕರ್ತರು ಜೆಸಿಬಿ ಮೂಲಕ ಬೃಹತ್ ಹಾರ ಹಾಕಿ ಅಭಿನಂದಿಸಿದರು.