ವಿಜಯಪುರ: ವಿಧಾನಸಭಾ ಚುನಾವಣೆಯ ಮತದಾನ ದಿನ ಕೆಲವೇ ದಿನಗಳಲ್ಲಿ ನಡೆಯಲಿದೆ. ಆದ್ರೆ, ವಿವಿಧ ರಾಜಕೀಯ ಪಕ್ಷಗಳದ ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರೂ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ‘ಒಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ’ ಎಂದು ಬಿಜೆಪಿ ಅಭ್ಯರ್ಥಿ ಕಣ್ಣೀರು ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಕನಮಡಿ ಗ್ರಾಮದಲ್ಲಿ ಬಿಜೆಪಿಯ ಅಭ್ಯರ್ಥಿ ವಿಜುಗೌಡ ಪಾಟೀಲ್ ಗ್ರಾಮದ ಪ್ರಚಾರ ಸಭೆಯಲ್ಲಿ ಕಣ್ಣೀರಿಡುತ್ತಾ, ”ಒಂದೇ ಒಂದು ಬಾರಿ ತಮ್ಮ ಸೇವೆ ಮಾಡಲು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿ” ಮತದಾರರನ್ನು ಕೇಳಿಕೊಂಡಿದ್ದಾರೆ. ಕಳೆದ ಎರಡು ಬಾರಿ ಬಬಲೇಶ್ವರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ವಿಜುಗೌಡ ಪಾಟೀಲ್ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ ಪಾಟೀಲ್ ವಿರುದ್ಧ ವಿಜುಗೌಡ ಪಾಟೀಲ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.