ವಿಜಯಪುರ: ಇನ್ಸ್ಟಾಗ್ರಾಮ್ನ ಸೈಲೆಂಟ್ ಕಿಲ್ಲರ್ 35110 ಐಡಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಬರೆದು ಪಾಕಿಸ್ತಾನ ಧ್ವಜದ ಚಿತ್ರ ಇದ್ದ ಫೋಟೊ ಸ್ಟೇಟಸ್ ಇಟ್ಟುಕೊಂಡಿದ್ದ ಆರೋಪದ ಮೇರೆಗೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಹೇಬ ಮುಲ್ಲಾ (21) ಎಂಬಾತನನ್ನು ತಾಳಿಕೋಟೆ ಪೊಲೀಸರು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ತದನಂತರ ವಿಜಯಪುರದ ದರ್ಗಾ ಜೈಲಿಗೆ ಕಳಿಸಿದ ಘಟನೆ ನಡೆದಿದೆ. ಹಿರೂರು ಗ್ರಾಮದ ಬೀಟ್ ಪೋಲಿಸ್ ಶಿವಪ್ಪ ಶರಣಪ್ಪ ಹಾಳಗೋಡಿ ಅವರು ಸರ್ಕಾರದ ತರ್ಪೆ ಪಿರ್ಯಾದು ದಾಖಲಿಸಿದ್ದು, ಪಿಎಸೈ ಸುರೇಶ ಮಂಟೂರ ಅವರು ಐಪಿಸಿ ಕಲಂ 153, 153(ಎ), 153 (ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಇಬ್ರಾಹಿಂನು ತಾಳಿಕೋಟೆ ಪಟ್ಟಣದ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ. ತನ್ನ ಇನ್ಸ್ಟಾಗ್ರಾಂ ಐಡಿ ಅಡಿ ಎಂಐಎಂ ಬಾಯ್ಸ್, ಪಾಕಿಸ್ತಾನ ಜಿಂದಾಬಾದ್ ಎಂದು ಬರೆದು ಹರಿಸು ಬಣ್ಣದ ಹೃದಯದ ಚಿತ್ರ ಮತ್ತು ಪಾಕಿಸ್ತಾನ ಧ್ವಜದ ಚಿತ್ರ ಇಟ್ಟು ಅದರ ಕೆಳಗೆ ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಪೋಸ್ಟ್ ಮಾಡಿದ್ದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತವಾಣದಲ್ಲಿ ಹರಿದಾಡುತ್ತಿತ್ತು. ಇದು ಗಮನಕ್ಕೆ ಬಂದ ಕೂಡಲೇ ಗ್ರಾಮಕ್ಕೆ ಹೋಗಿ ಆತನ ಮೊಬೈಲ್ ಪರಿಶೀಲಿಸಿದಾಗ ಆತ ಸ್ಟೇಟಸ್ ಇಟ್ಟುಕೊಂಡಿರುವುದು ಸಾಬೀತಾಗಿದೆ. ಈತ ಸಮಾಜದಲ್ಲಿ ದ್ವೇಷ ಭಾವನೆಯಿಂದ ಜಾತಿ ಜಾತಿಗಳ ನಡುವೆ ಕೋಮು, ದ್ವೇಷ ಮತ್ತು ವೈಮನ್ಸ್ಸಿನ ಭಾವನೆಗಳನ್ನು ಹಾಗೂ ಮತೀಯ ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಕೃತ್ಯ ಎಸಗಿರುವುದರಿಂದ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.