ವಿಜಯಪುರ: ನಿತ್ಯ ಬಳಕೆಯ ಹಸಿಮೆಣಸಿನಕಾಯಿ ಧಾರಣೆ ಕುಸಿತಗೊಂಡ ಪರಿಣಾಮ ಅಧಿಕ ಬೆಲೆಯ ಆಸೆಯಿಂದ ಎಪಿಎಂಸಿಗೆ ಮಾಲು ತಂದಿದ್ದ ರೈತರು ಮತ್ತೆ ನಿರಾಸೆ ಅನುಭವಿಸಿದ್ದಾರೆ. ಕ್ವಿಂಟಲ್ ಹಸಿಮೆಣಸಿನಕಾಯಿಗೆ 5 ಸಾವಿರ ರೂ. ಇದ್ದದ್ದು ಈಗ 2 ಸಾವಿರಕ್ಕೆ ಇಳಿದಿದ್ದು ರೈತರು ಕಂಗಾಲಾಗಿದ್ದಾರೆ. ಆಹಾರ ಬಳಕೆಯಲ್ಲಿ ಪ್ರಮುಖ ಸ್ಥಾನಪಡೆದಿರುವ ಹಸಿಮೆಣಸಿನಕಾಯಿಗೆ ಬೇಡಿಕೆ ನಿರಂತರವಾಗಿ ಇರುತ್ತದೆ. ಹೀಗಾಗಿಯೇ ರೈತರು ಒಣಮೆಣಸಿನಕಾಯಿ ಮಾಡುವ ಮೊದಲೇ ಹಸಿ ಕಾಯನ್ನು ಕಿತ್ತು ಮಾರುಕಟ್ಟೆಗೆ ತರುತ್ತಾರೆ. ಆದರೆ ಅವರ ದುರಾದೃಷ್ಟಕ್ಕೆ ಎಪಿಎಂಸಿಗೆ ಆವಕ ಪ್ರಮಾಣ ಅಧಿಕವಾಗಿ ಏಜೆಂಟರು ಬೆಲೆಯನ್ನು ಪೂರ್ಣವಾಗಿ ಇಳಿಸಿದ ಪರಿಣಾಮ ಅನ್ನದಾತರ ಪಾಲಿಗೆ ಹಸಿಮೆಣಸಿನಕಾಯಿ ಇನ್ನೂ ಖಾರವಾಗಿ ಪರಿಣಮಿಸಿತು. ಅಲ್ಲದೇ ಸದ್ಯ ಮದುವೆ, ವಿವಿಧ ಸಮಾರಂಭಗಳು ಇಲ್ಲದ ಕಾರಣ ಹಸಿಮೆಣಸಿನಕಾಯಿಗೆ ಬೇಡಿಕೆ ಕಡಿಮೆಯಾಗುತ್ತದೆ. ಖರೀದಿಗೆ ಗ್ರಾಹಕರು ಬರುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೊರ ಭಾಗದಿಂದ ಅಧಿಕ ಆವಕ ವಿಜಯಪುರ ಜಿಲ್ಲೆಯಲ್ಲಿಯೇ ಎರಡು-ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿಮೆಣಸಿನಕಾಯಿ ಬೆಳೆಯಲಾಗುತ್ತದೆ. ಇದರ ಜೊತೆಗೆ ಚಿಕ್ಕೋಡಿ, ಬೆಳಗಾವಿ ಭಾಗದಿಂದ ವಿಜಯಪುರ ಎಪಿಎಂಸಿಗೆ ಮೆಣಸಿನಕಾಯಿ ಆವಕವಾಗುತ್ತದೆ. ಈ ಬಾರಿ ಎಲ್ಲ ಕಡೆಯಿಂದಲೂ ಒಳ್ಳೆಯ ಫಸಲು ಬಂದಿರುವುದರಿಂದ ಆವಕ ಪ್ರಮಾಣವೂ ಮಿತಿಮೀರಿದೆ. ಹೀಗಾಗಿ ಪರಿಸ್ಥಿತಿ ಲಾಭಮಾಡಿಕೊಳ್ಳುವ ದಲ್ಲಾಳಿಗಳು ಬೆಲೆಯನ್ನು ಇಳಿಸಿದ್ದಾರೆ. ಇದರ ಪರಿಣಾಮ ನೇರವಾಗಿ ರೈತರಿಗಾಗಿ ತತ್ತರಿಸಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮೆಣಸಿನಕಾಯಿ ಬೆಲೆ ಕುಸಿತದ ವರದಿಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಅಲ್ಲದೇ ಹೊರ ಭಾಗದಿಂದ ಜಿಲ್ಲೆಗೆ ಬರುವ ಮೆಣಸಿನಕಾಯಿಗೆ ನಿಬಂಧನೆಗಳನ್ನು ಹಾಕಿದರೆ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸುತ್ತಾರೆ.