ವಿಜಯಪುರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯ ವಸತಿ ನಿಲಯಗಳಲ್ಲಿ ಆರಂಭಿಸಿದ “ಮಿಷನ್ ವಿದ್ಯಾಪುರ” ಚೇತನ ಸಂಜೆಯ ಆನ್ಲೈನ್ ಕ್ಲಾಸ್ಗಳಿಂದ ವಸತಿ ನಿಲಯದ ವಿದ್ಯಾರ್ಥಿಗಳು 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಮತ್ತೆ ಚೇತನ ಸಂಜೆ ಆನ್ಲೈನ್ ತರಗತಿ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ನಿಲಯಗಳ ವಾರ್ಡನ್ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023-24ನೇ ಸಾಲಿಗೆ ವಸತಿ ನಿಲಯದ ಎಸ್.ಎಸ್.ಎಲ್.ಸಿ ಹಾಗೂ ದ್ವಿತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ “ಮಿಷನ್ ವಿದ್ಯಾಪುರ” ಚೇತನ ಸಂಜೆಯ ಆನ್ಲೈನ್ ಕ್ಲಾಸ್ ಗಳನ್ನು ಪುನ: ಪ್ರಾರಂಭಿಸಲು ಸೂಚಿಸಿದ ಅವರು, ಆನ್ಲೈನ್ ಕ್ಲಾಸ್ಗಳ ಸದುಪಯೋಗ ಪಡೆದುಕೊಂಡು ಉತ್ತಮ ಫಲಿತಾಂಶ ಸಾಧಿಸಿದ್ದಕ್ಕೆ ಅಭಿನಂದಿಸಿದರು. ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಬೇಕು. ನಿಲಯಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿಲಯದ ವಿದ್ಯಾರ್ಥಿಗಳಿಂದ ಯಾವುದೇ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ವಸತಿ ನಿಲಯಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪ್ರತಿ ದಿನ ಭೇಟಿ ನೀಡಬೇಕು. ವಸತಿ ನಿಲಯದ ಮೇಲ್ವಿಚಾರಕರು ಕಡ್ಡಾಯವಾಗಿ ಸಾಯಂಕಾಲ ಮಕ್ಕಳ ಮಿಷನ್ ವಿದ್ಯಾಪುರ ಕ್ಲಾಸ್ ನ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಮಕ್ಕಳ ರಾತ್ರಿ ಊಟ ಆಗುವವರೆಗೂ ಕಡ್ಡಾಯವಾಗಿ ವಸತಿ ನಿಲಯದಲ್ಲಿರಬೇಕು. ವಸತಿ ನಿಲಯದಲ್ಲಿ ಸ್ವಚ್ಚತೆ ಕಾಪಾಡಬೇಕು. ಊಟ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಏನಾದರೂ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು, ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಬಿ. ಕನ್ನೊಳಿ, ಹಿಂದುಳಿದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪೂರ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀಮತಿ ಯಲ್ಲಮ್ಮ ಪಡೆಸೂರ, ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರು ಹಾಗೂ ಇಲಾಖೆಯ ಎಲ್ಲ ವಸತಿ ನಿಲಯಗಳ ವಾರ್ಡನ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.