ವಿಜಯಪುರ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರೌಢ ಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಉಪನ್ಯಾಸಕರ ಬಡ್ತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಜಾರಿಗೊಳಿಸುವುದು ಸೇರಿದಂತೆ ಪ್ರೌಢಶಾಲಾ ಶಿಕ್ಷಕರ ಸಮಸ್ತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬದ್ಧವಾಗಿದೆ, ಶಿಕ್ಷಕರ ಸಮಸ್ಯೆ ನಿವಾರಣೆಯನ್ನೇ ತನ್ನ ಗುರಿಯಾಗಿಸಿಕೊಂಡಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜ ಬಿರಾದಾರ ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರೌಢಶಾಲಾ ಶಿಕ್ಷಕರ ಪಾತ್ರ ಹಿರಿಯದಾಗಿದೆ, ಆದರೆ ಸಹ ಶಿಕ್ಷಕರು ಸಹ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ, ಅನೇಕ ನ್ಯಾಯಯುತವಾದ ಬೇಡಿಕೆಗಳು ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಧ್ವನಿಯಾಗಿ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ರೀತಿಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘ ಸಾತ್ವಿಕ ಒತ್ತಡ, ಆಂದೋಲನವನ್ನು ನಿರಂತರವಾಗಿ ಸಂಘಟಿಸಲಿದೆ ಎಂದರು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಮತ್ತು ಬೇಡಿಗಳ ಬಗ್ಗೆ ಪಟ್ಟಿಮಾಡಿ ಅವುಗಳನ್ನು ಪರಿಹಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ, ಮಾರ್ಗದರ್ಶನ ಅತ್ಯಂತ ಅಗತ್ಯ ಎಂದರು.
ಸಂಘದ ಕಾರ್ಯದರ್ಶಿ ಮಲ್ಲನಗೌಡ ಹಡಲಗೇರಿ ಮಾತನಾಡಿ, ಸಂಘವು ಶಿಕ್ಷಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಸಮಸ್ಯೆಗಳನ್ನು ಜಿಲ್ಲಾ ಸಂಘವು ಪರಿಹಾರ ಮಾಡಿದ್ದು, ದಿನದ ಇಪ್ಪತ್ತಾನಾಲ್ಕು ಗಂಟೆ ವಾರದ ಏಳು ದಿನ ಶಿಕ್ಷಕರ ಸಂಘವು ಶಿಕ್ಷಕರ ಜೊತೆ ನಿಲ್ಲಲಿದೆ, ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಿದೆ ಎಂದರು. ಸಂಘಟನಾ ಕಾರ್ಯದರ್ಶಿ ಸಂಗಮೇಶ ಕಮತಗಿ, ಸಹ ಕಾರ್ಯದರ್ಶಿ ಪಿ.ಎಸ್. ಅಗ್ನಿ, ನಗರ ಘಟಕದ ಅಧ್ಯಕ್ಷ ಅರಳಿಮಟ್ಟಿ, ವಸಂತ ನಾಯಕ್, ಆರ್.ಎಚ್. ಬಿರಾದಾರ, ಹನುಮಂತ ಕುಡಚಿ, ಎಂ.ಎಸ್. ಝಳಕಿ, ಆರ್.ಇ. ರಾಠೋಡ್, ಎಸ್.ಎಸ್. ಯಾಳವಾರ, ಅಶೋಕ ಜಾಧವ ಇದ್ದರು.