ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರಪಾಲಿಕೆ ಹಿರಿಮೆಯ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ದಿ. 20ರಂದು ಚುನಾವಣೆ ನಡೆಯಲಿದ್ದು ಆಡಳಿತಾರೂಢ ಬಿಜೆಪಿ ತನ್ನ ಸದಸ್ಯರಿಗೆ ಕಾಂಗ್ರೆಸ್ ಆಮಿಷ ಒಡ್ಡುತ್ತಿದೆ ಎಂಬ ಆರೋಪದ ಬೆನ್ನ ಹಿಂದೆಯೇ ಇಂದು ತನ್ನ ಬಹುತೇಕ ಸದಸ್ಯರನ್ನು ದಾಂಡೇಲಿಯ ರೆಸಾರ್ಟ್ಗೆ ಸ್ಥಳಾಂತರ ಮಾಡಿದೆ. ಸಂಜೆ ಬಿಜೆಪಿಯ ಪಾಲಿಕೆ ಸದಸ್ಯರು ಹಾಗೂ ಬೆಂಬಲಿಸಿದ ಪಕ್ಷೇತರ ಸದಸ್ಯರು ಟೆಂಪೋ ಟ್ರಾವೆಲರ್ ಮತ್ತು ಇತರ ವಾಹನಗಳಲ್ಲಿ ದಾಂಡೇಲಿಗೆ ತೆರಳಿದ್ದಾರೆ. ಕೆಲವರು ಕುಟುಂಬದ ಸದಸ್ಯರೊಂದಿಗೆ ತೆರಳಿದ್ದಾರೆ. ನಿನ್ನೆ ಬಿಜೆಪಿಯ ಮಹಾನಗರ ಅಧ್ಯಕ್ಷ ಸಂಜಯ ಕಪಟಕರ,ಮೇಯರ್ ಈರೇಶ ಅಂಚಟಗೇರಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ವಿರೋದಪಕ್ಚವಾದ ಕಾಂಗ್ರೆಸ್ನ ಮುಖಂಡರು ತಮ್ಮ ಕೆಲ ಸದಸ್ಯರಿಗೆ ಅಧಿಕಾರ ಮತ್ತು 50ಲಕ್ಷ ಹಣದ ಅಮಿಷವೊಡ್ಡುತ್ತಿದ್ದಾರೆಂದು ಆರೋಪಿಸಿದ್ದರು. 82 ಸದಸ್ಯರು ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯ ಬಲ ಅಲ್ಲದೇ ಮೂವರು ಪಕ್ಷೇತರ ಬೆಂಬಲದೊಂದಿಗೆ 42 ಸ್ಥಾನ ಹೊಂದಿದೆ.ನಾಲ್ವರು ಜನಪ್ರತಿನಿಧಿಗಳು ಮತ ಕಮಲ ಮತ ಹಾಕಬಹುದಾಗಿದೆ. ಕಾಂಗ್ರೆಸ್ 33 ಸದಸ್ಯ ಬಲ ಹೊಂದಿದ್ದು ಇಬ್ಬರು ಪಕ್ಷೇತರರ ಬೆಂಬಲ, ಎಂಐಎಂ ಅಲ್ಲದೇ ತಟಸ್ಥ ಇನ್ನೋರ್ವ ಪಕ್ಷೇತರನ ಬೆಂಬಲ ದೊರೆತಲ್ಲಿ 39 ಆಗಲಿದೆ. ಕಾಂಗ್ರೆಸ್ಗೆ ಇಬ್ಬರ ಜನ ಪ್ರತಿನಿಧಿಗಳ ಬೆಂಬಲವಿದ್ದರೂ ಒಬ್ಬರು ಭಾಗಿಯಾಗುವುದು( ವಿನಯ ಕುಲಕರ್ಣಿ) ಕಷ್ಟವಾಗಬಹುದು. ಇದುವರೆಗೆ ಬಿಜೆಪಿಯ ನಿರ್ಣಾಯಕರಾಗಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ಗೆ ಹೋಗಿದ್ದು ಅವರ ಬೆಂಬಲಿತ ಕೆಲವರು ಗೈರು ಹಾಜರಾಗುವುರೆಂಬ ಗುಸು ಗುಸು ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸದಸ್ಯರನ್ನು ನೇರವಾಗಿ ದಿ. ೨೦ರ ಬೆಳಿಗ್ಗೆ ರೆಸಾರ್ಟನಿಂದಲೇ ಕರೆತರಲು ನಿರ್ಧರಿಸಿದ್ದಾರೆನ್ನಲಾಗಿದೆ. ಬ್ರೆಜಿಲ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ನೇರವಾಗಿ ರೆಸಾರ್ಟ್ಗೆ ತೆರಳಲಿದ್ದು ಅಲ್ಲಿಯೇ ಅಭಿಪ್ರಾಯ ಆಲಿಸಿ ಮೇಯರ್ ಅಭ್ಯರ್ಥಿ ಅಂತಿಮಗೊಳಿಸುವರೆನ್ನಲಾಗಿದೆ.
ಕೆಲ ಸದಸ್ಯರು ಅರೋಗ್ಯ ಮತ್ತು ಇನ್ನಿತರ ಕಾರಣದಿಂದ ಇಲ್ಲೇ ಇದ್ದು ನಾಳೆ ತೆರಳುವರೆನ್ನಲಾಗಿದೆ. ಕೇಂದ್ರ ಸಚಿವ ಜೋಶಿಯವರ ಕಚೇರಿಯಿರುವ ಚಿಟಗುಪ್ಪಿ ಆಸ್ಪತ್ರೆ ಆವರಣದಿಂದ ಕೆಲವರು ಟೆಂಪೋ ಟ್ರಾವೆಲರ್ದಲ್ಲಿ ತೆರಳಿದರೆ ಉಳಿದವರು ಬೇರೆ ಬೇರೆ ವಾಹನಗಳಲ್ಲಿ ತೆರಳಿದ್ದಾರೆ. ಕೆಲವರು ಮಾಧ್ಯಮದವರನ್ನು ನೋಡಿ ಮುಖ ಮುಚ್ಚಿ ವಾಹನ ಹತ್ತಿದ್ದಾರೆ. ಶೆಟ್ಟರ್ ಮ್ಯಾಜಿಕ್ ಯಶಸ್ವಿಯಾದರೆ ಮತ್ತಷ್ಟು ಮುಖಭಂಗ ಎದುರಿಸಬೇಕಾಗುವುದೆಂಬ ಕಾರಣದಿಂದ ಬಿಜೆಪಿ ತನ್ನ ಸದಸ್ಯರನ್ನು ಸ್ಥಳಾಂತರಿಸಿದೆ ಎನ್ನಲಾಗಿದೆ. ಕೆಲ ಸದಸ್ಯರಿಗೆ ಎಲ್ಲಿಗೆ ಕರೆದೊಯ್ದತ್ತಿದ್ದಾರೆ ಎಂಬ ಕನಿಷ್ಟ ಮಾಹಿತಿಯೂ ಇಲ್ಲವಾಗಿದೆ.ಯಾರೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲವಾಗಿದೆ.