ವಿಜಯಪುರ: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ವರುಣ ದೇವ ಜಿಲ್ಲೆಗೆ ಕಾಲಿಟ್ಟಿದ್ದಾನೆ. ಗುಮ್ಮಟನಗರಿ ವಿಜಯಪುರದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆಷಾಢದ ಗಾಳಿಯೊಂದಿಗೆ ವರುಣನ ಎಂಟ್ರಿಯಾಗಿದೆ.
ಜೂನ್ ಮಧ್ಯಭಾಗದಲ್ಲೂ ಬಿಸಿಲ ಝಳಕ್ಕೆ ಜನತೆ ಬೇಸತ್ತಿದ್ದರು. ಮುಂಗಾರು ಪ್ರವೇಶ ಜೂ.6ರಂದು ಆಗಬೇಕಾಗಿತ್ತು. ಆದರೆ ಮಳೆ ಬರುವ ಲಕ್ಷಣವೇ ಕಾಣಲಿಲ್ಲ. ಹವಾಮಾನ ಇಲಾಖೆ ಮಾಹಿತಿಯಂತೆ ಜೂ. 9ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, 2-3ದಿನದಲ್ಲಿ ಮಳೆಯಾಗಬಹುದು ಎಂದು ಸೂಚಿಸಿತ್ತು. ಅದು ಸಹ ಹುಸಿಯಾದ ಕಾರಣ ಅನ್ನದಾತ ಬಿತ್ತನೆ ಮಾಡದೇ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದನು.
ಮಳೆ ಬಾರದೇ ನಾನಾ ರೀತಿಯ ಪ್ರಾರ್ಥನೆಗಳಿಗೆ ಮೊರೆ ಹೋಗಿದ್ದರು. ಇತ್ತ ಕೃಷ್ಣೆಯ ಒಡಲು ಸಹ ಬರಿದಾಗಿದೆ. ಇದರಿಂದ ಅನ್ನದಾತ ಕಂಗಾಲಾಗಿದ್ದಾನೆ.
ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆ ಸದ್ಯದ ಪರಿಸ್ಥಿತಿಯಲ್ಲಿ ಇದೆ. ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಹಲವು ರೈತ ಸಂಘಟನೆಗಳು ಆಗ್ರಹಿಸಿದ್ದವು. ತಡವಾಗಿಯಾದರೂ ಜಿಲ್ಲೆಯ ಜನತೆಗೆ ಮಳೆರಾಯ ಸಂತಸ ತಂದಿದ್ದಾನೆ. ಸದ್ಯ ಭಾನುವಾರ ಮಣ್ಣೆತ್ತಿನ ಅಮವಾಸ್ಯೆ ದಿನ ರಾತ್ರಿ ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆ ಆರಂಭವಾಗಿದೆ. ಇದು ಇನ್ನೇರಡು ದಿನ ಮುಂದುವರೆದರೆ ತೊಗರಿ, ಸಜ್ಜೆ, ಮೆಕ್ಕಿಜೋಳ ಬೆಳೆಯಲು ರೈತರಿಗೆ ಅನುಕೂಲವಾಗಲಿದೆ. ಸದ್ಯ ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.