ವಿಜಯಪುರ: ಬಟ್ಟೆ ತೊಳೆಯಲು ಹೋದಾಗ ಭೀಮಾ ನದಿಯಲ್ಲಿ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ. 38 ವರ್ಷದ ಗೀತಾ ಹೊನ್ನೂರ, 12 ವರ್ಷದ ಶೋಭಿತಾ, 10 ವರ್ಷದ ವಾಸುದೇವ ಮೃತಪಟ್ಟಿರುವ ದುರ್ದೈವಿ. ಭೀಮಾ ನದಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಯಲ್ಲಿ ಇಳಿದಿದ್ದಾನೆ. ಇದನ್ನು ಕಂಡು ಅಕ್ಕ ಶೋಭಿತಾ ತಮ್ಮನ್ನು ಉಳಿಸಿಲು ಹೋದಾಗ ಇಬ್ಬರಿಗೂ ಈಜಲು ಬಾರದೇ ಮುಳುಗುತ್ತಿದ್ದರು. ಅದಕ್ಕಾಗಿ ಮಕ್ಕಳನ್ನು ಉಳಿಸಲು ಹೋಗಿ ತಾಯಿ, ಇಬ್ಬರು ಮಕ್ಕಳು ಭೀಮಾ ನದಿಯ ಪಾಲಾಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.