ವಿಜಯಪುರ: ರಾಜ್ಯದಲ್ಲಿ ಕೋಲಾರ ಎಂದಾಕ್ಷಣ ನೆನಪು ಆಗೋದು ಚಿನ್ನದ ಗಣಿ ಜಿಲ್ಲೆ. ಆದ್ರೇ, ಕೊಲ್ಹಾರ ಎಂದಾಕ್ಷಣ ಉತ್ತರ ಕರ್ನಾಟಕ ಮಂದಿಗೆ ಮೊಸರು ಗಡಿಗೆ. ಹೌದು..! ವಿಜಯಪುರ ಜಿಲ್ಲೆಯ ಕೊಲ್ಹಾರ ಗಡಿಗೆ ಮೊಸರಿಗೆ ಫೇಮಸ್. ಕೊಲ್ಹಾರ ಮೊಸರಿಗೆ ತನ್ನದೇ ಆದ ವಿಶೇಷ ಗುಣವಿದೆ. ಹೀಗಾಗಿ ಎಲ್ಲರನ್ನೂ ತನ್ನತ್ತ ಈ ಮೊಸರು ಆಕರ್ಷಿಸುತ್ತದೆ. ವಿಶೇಷವಾಗಿ ಜವಾರಿ ರಾಸಿನ ಹಾಲಿನಿಂದ ಹಾಗು ಮಡಿಕೆಯಲ್ಲಿ ಸಂಸ್ಕರಿಸಿರುವುದರಿಂದ ಈ ಮೊಸಲು ವಿಶೇಷತೆ ಸ್ಪರ್ಶ ಪಡೆದುಕೊಂಡಿರುತ್ತದೆ. ಕೊಲ್ಹಾರ ಮೊಸರು ಗಟ್ಟಿ ಹಾಗೂ ಗುಣಮಟ್ಟಕ್ಕೂ ಹೆಸರುವಾಸಿ. ಮೊಸರು ರೂಪಿಸುವ ಸಂದರ್ಭದಲ್ಲಿಯೂ ಸಹ ಮಣ್ಣಿನ ಮಡಿಕೆಗಳನ್ನೇ ಉಪಯೋಗಿಸುವುದು ಸಹ ವಾಡಿಕೆ. ಹೀಗಾಗಿ ಮಣ್ಣಿನ ಸೊಬಗು ಸಹ ಮೊಸರಿನ ಗುಣಮಟ್ಟಕ್ಕೆ ಸಾಕ್ಷಿಯಾಗುತ್ತದೆ.
ಸಣ್ಣ ಮಡಿಕೆಗಳಲ್ಲಿ ಈ ಮೊಸರು ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ. ಮಡಿಕೆಯ ಮಣ್ಣಿನ ವಾಸನೆ, ಆರೋಗ್ಯಕರ ಗುಣವೂ ಈ ಮೊಸರಿನ ಸ್ವಾದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಕ್ಕರೆ ಹಾಕಿ ಟೇಸ್ಟ್ ಮಾಡಿದರೆ ಒಂದು ಗಡಿಗೆ ಮೊಸರು ಸೇವಿಸಿದರೆ ಸಾಕಾಗುವುದಿಲ್ಲ, ಇನ್ನೊಂದು ಗಡಿಗೆ ಮೊಸರು ಸೇವಿಸುವಷ್ಟು ಮಟ್ಟಿಗೆ ಟೇಸ್ಟ್ ಹಿಡಿದಿಡುತ್ತದೆ.
ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ, ಸೊಲ್ಲಾಪೂರ, ಗೋವಾ, ತಮಿಳುನಾಡು ಹೀಗೆ ಎಲ್ಲ ಕಡೆಯೂ ಈ ಮೊಸರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಕೊಲ್ಹಾರ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ವಾಹನ ನಿಲ್ಲಿಸಿ ಗಡಿಗೆ ಮೊಸರು ಸೇವಿಸುವುದು ರೂಢಿ. ಅಷ್ಟೇ ಅಲ್ಲದೇ ಅನೇಕರು ಕೊಲ್ಹಾರಕ್ಕೆ ವಿಶೇಷವಾಗಿ ಈ ಮೊಸರು ಸೇವಿಸಲೆಂದೆ ಪ್ರಯಾಣ ಬೆಳೆಸುವುದು ಇದೆ, ಸಕ್ಕರೆ ಹಾಕಿಕೊಂಡು ಸಾಕಷ್ಟು ಮೊಸರು ಸೇವಿಸಿ ಜೊತೆಗೆ ಮಣ್ಣಿನ ಗಡಿಗೆಗಳಲ್ಲಿ ಮೊಸರು ಪ್ಯಾಕ್ ಮಾಡಿ ಪಾರ್ಸಲ್ ತೆಗೆದುಕೊಂಡು ಬರುವುದು ಸಹ ವಾಡಿಕೆ.
ಕೊಲ್ಹಾರ ಯುಕೆಪಿ ಕ್ರಾಸ್ ಬಳಿ ಹಲವಾರು ಜನರು ರಸ್ತೆಯ ಬದಿಯಲ್ಲಿ ಮಣ್ಣಿನ ಮಡಿಕೆಗಳಲ್ಲಿ ಈ ಕೊಲ್ಹಾರ ಮೊಸರು ಮರಾಟ ಮಾಡುತ್ತಾ ಕುಳಿತಿರುವುದನ್ನು ಕಾಣುತ್ತೇವೆ, 40 ರೂ.ಗಳಿಂದ 50 ರೂ.ಗಳವರೆಗೆ ಮಾರಾಟವಾಗುತ್ತದೆ.
ಕೊಲ್ಹಾರ ಗಡಿಗೆ ಮೊಸರು ಭಾಳ ಫೇಮಸ್ ರೀ, ನಾವಂತೂ ಕಳೆದ 30 ವರ್ಷಗಳಿಂದ ಈ ಮೊಸರು ಮಾರಾಟ ಮಾಡಕತ್ತೀವಿ, ದೂರದಿಂದ ಮಂದಿ ಬಂದು ಮೊಸರು ಒಯ್ತಾರೀ… ಅದೇ ಗುಣಮಟ್ಟದಿಂದ ಮೊಸರು ಸಿದ್ಧಪಡಿಸಿ ಮಾಡತೀವ್ರಿ ಎಂದು ಸಂತೋಷದಿಂದ ನುಡಿದರು.
ಬೇರೆ ಮೊಸರಿನಂತೆ ಕೊಲ್ಹಾರ ಮೊಸರು ಸಂಪೂರ್ಣ ಹುಳಿಯಾಗಿಲ್ಲ, ಸಕ್ಕರೆ ಹಾಕಿ ಸವಿದರೆ ಇನ್ನೊಂದು ಇನ್ನೊಂದು ಎನ್ನುವಂತೆ ಇರುತ್ತದೆ, ಆರೋಗ್ಯಕ್ಕೂ ಸಹ ಇದು ಒಳ್ಳೆಯದು, ಹೀಗಾಗಿ ಕೊಲ್ಹಾರ ಮೊಸರು ಸೇವಿಸುವದನ್ನು ರೂಢಿಸಿಕೊಂಡಿದ್ದೇನೆ ಎಂದು ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡರು.