ವಿಜಯಪುರ: ವಿಜಯಪುರ : ಶ್ರೀಗಂಧ ಕಟ್ಟಿಗೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 1 ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದಸ್ತಗಿರಿಸಾಬ ಚಂದನ ಹಾಗೂ ಇಂಡಿ ತಾಲೂಕಿನ ಸಾಲೋಟಗಿಯ ಹಾಜೀಮ್ ವಾಲಿಕಾರ ಶಿಕ್ಷೆಗೊಳಗಾದ ಅಪರಾಧಿಗಳು. ಇವರಿಬ್ಬರು 2019ರಲ್ಲಿ ಆಲಮೇಲ ಸಮೀಪ ನಾಗರಹಳ್ಳಿ ಗ್ರಾಮದ ಮಲ್ಲಣ್ಣ ಬಾಗೇವಾಡಿ ಎಂಬುವವರ ತೋಟದಲ್ಲಿ ಬೆಳೆದಿದ್ದ ಶ್ರೀಗಂಧ ಮರವನ್ನು ಕಡಿದು, ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆಲಮೇಲ ಪೊಲೀಸರು ಆರೋಪಿಗಳನ್ನು ಬಂಧಿಸಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಿವಾಜಿ ನಾಲವಾಡೆ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.