ವಿಜಯಪುರ: ಬರದ ನಾಡಿನ ಅರಣ್ಯದಲ್ಲಿ ಅದೇನೋ ಕಿವಿಗಡಚಿಕ್ಕುವ ಶಬ್ದ. ಅದನ್ನು ಕೇಳಲು, ನೋಡಲೆಂದೇ ನೆರೆದಿರೋ ಜನರು. ಅಷ್ಟಕ್ಕೂ ಇವ್ರ ಕುತೂಹಲಕ್ಕೆ ಕಾರಣವಾಗಿರೋದು ಸದಾ ತಲೆ ಕೆಳಗೆ ಮಾಡಿ ನೇತಾಡೋ ಕಪ್ಪು ಬಾವಲಿಗಳು. ಹೌದು..! ವಿಜಯಪುರ ಜಿಲ್ಲೆಯ ಆಲಮಟ್ಟಿಯ ಅರಣ್ಯದಲ್ಲೀಗ ಬಾವಲಿಗಳ ಲೋಕ ನೋಡುಗರ ಕುತೂಹಲ ಹೆಚ್ಚಿಸಿದೆ. ವಿಜಯಪುರ ಜಿಲ್ಲೆ ಹೇಳೋದಕ್ಕೆ ಬರದ ನಾಡೇ ಆದ್ರೂ ಗುಡ್ಡ ಬೆಟ್ಟಗಳ ಸಾಲಿಗಳಿಗೇನು ಕಡಿಮೆಯಿಲ್ಲ. ಅಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳು ಸಹ ಅಸಂಖ್ಯಾತ ಸಂಖ್ಯೆಯಲ್ಲಿವೆ. ಆದ್ರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಕಾಣಿಸಿಕೊಂಡು ಮರೆಯಾಗಿದ್ದ ಬಾವಲಿಗಳ ಗುಂಪು ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಹೀಗಾಗಿ ಅದನ್ನ ನೋಡಲು ಬರುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಿದೆ. ಏನಿಲ್ಲ ಅಂದ್ರೂ, ಬಾವಲಿಗಳ ಸಂಖ್ಯೆ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗಿದೆ. ಆದ್ರೆ, ಜನರ ಕುತೂಹಲಕ್ಕೆ ಕಾರಣವಾಗಿರೋದು, ಇಲ್ಲಿರೋ ಕೆಲವೊಂದು ಬಾವಲಿಗಳು ಸಾಮಾನ್ಯ ಬಾವಲಿಗಳಿಗಿಂತ ವಿಭಿನ್ನವಾಗಿದೆ. ದೊಡ್ಡ ಗಾತ್ರ, ಚೂಪಾದ ಮೂಗು ಹೀಗೆ ಒಂದಿಷ್ಟು ವಿಭಿನ್ನತೆ ಹೊಂದಿದೆ. ಇದು ಸಹಜವಾಗಿಯೇ ಜನರ ಆಕರ್ಷಣೆಗೂ ಕಾರಣವಾಗಿದೆ. ರಾತ್ರಿ ವೇಳೆ ತಿರುಗಾಡೋ ಬಾವಲಿಗಳು ಹಗಲಲ್ಲಿ ಸದಾ ಕಿವಿಗಡಚಿಕ್ಕುವ ಶಬ್ದದೊಂದಿಗೆ ಮರದಲ್ಲಿ ಕಾಣಿಸಿಕೊಳ್ಳುತ್ತವೆ. ಬಾವಲಿಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆದಿದ್ದು ತೀರಾ ಅಪರೂಪ. ಅದ್ರಲ್ಲೂ ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿರುವ ಈ ಬಾವಲಿಗಳ ಬಗ್ಗೆ ವಿಶೇಷವಾದ ಅಧ್ಯಯನದ ಅಗತ್ಯವಿದೆ ಎಂದು ಪ್ರವಾಸಿಗರು ಅಭಿಪ್ರಾಯಪಡುತ್ತಿದ್ದಾರೆ.