ವಿಜಯಪುರ: ರಾಶಿ ರಾಶಿ ದಾಳಿಂಬೆ ಹಣ್ಣುಗಳು ಮಾರುಕಟ್ಟೆಗೆ ಹೋಗಲು ಬಾಕ್ಸ್ ಸೇರುತ್ತಿವೆ. ಇದನ್ನ ಪ್ಯಾಕ್ ಮಾಡುತ್ತಿರುವ ಕೆಲಸಗಾರರು…! ಹೌದು.. ಬರದನಾಡಿನಲ್ಲಿ ದಾಳಿಂಬೆ ಕೃಷಿ ಮಾಡಿಕೊಂಡು ಭರ್ಜರಿ ಆದಾಯ ಗಳಿಸುತ್ತಿರವ ಪ್ರಗತಿಪರ ರೈತ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಹಾಗೂ ಪ್ರಗತಿಪರ ರೈತ ಬಸಪ್ಪ ಸಿದ್ದಪ್ಪ ಕುಂಬಾರ ದಾಳಿಂಬೆ ಬೆಳೆದು ಯಶಸ್ವಿಯಾಗಿದ್ದಾರೆ. ಇವರು ಪಶುವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ 10 ವರ್ಷಗಳ ಹಿಂದೆ ನಿವೃತ್ತಿಯಾದವರು. ತಮ್ಮ ನಿವೃತ್ತಿ ಜೀವನವನ್ನ ಮನೆಯಲ್ಲಿ ಕುಳಿತು ಸಮಯ ಕಳೆಯುವ ಬದಲು ತಮ್ಮ ಹತ್ತು ಎಕರೆ ಜಮೀನಿನಲ್ಲಿ ಈರುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದಾರೆ. ಅದರಲ್ಲಿ ಮೂರು ಎಕರೆಯಲ್ಲಿ ಮಾತ್ರ 700 ಸಸಿಗಳನ್ನ ನಾಟಿ ಮಾಡಿಕೊಂಡು ಭರಪೂರ ದಾಳಿಂಬೆ ಬೆಳೆದಿದ್ದರು. ಬೆಳೆದ ಮೊದಲ ಫಸಲು ಮೂರು ಎಕರೆಯಲ್ಲಿ 8 ಟನ್ ಬೆಳೆದು 4 ನಾಲ್ಕು ಲಕ್ಷ ಆದಾಯ ತಂದು ಕೊಟ್ಟಿತ್ತು. ಎರಡನೇ ಫಸಲು ಕಟಾವಿನ ವೇಳೆ 15 ಟನ್ ಬೆಳೆದು 10 ಲಕ್ಷ ರೂಪಾಯಿ ಆದಾಯ ಸಿಕ್ಕಿತ್ತು. ಇನ್ನೂ ಮೂರನೇ ಕಟಾವು ಅಂದಾಜು 10 ಟನ್ ಆಗುವ ನಿರಿಕ್ಷೆ ಇದ್ದು, ಸುಮಾರು 10 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಪ್ರತಿ ಕಟಾವಿನಲ್ಲೂ ಲಕ್ಷದ ಮೇಲೆಯೇ ಹಣ ಗಳಿಸುತ್ತಾ ಬಂದಿದ್ದಾರೆ. ದಾಳಿಂಬೆಯು ಕೇಸರ್ ತಳಿಗೆ ಸೇರಿದ ಗಿಡಗಳಾಗಿವೆ. ಈ ತಳಿಯ ವಿಶೇಷವೆಂದರೆ ಗಾತ್ರ ದೊಡ್ಡದಾಗಿದ್ದು ಕಲರ್ ಸಂಪೂರ್ಣ ಕೆಂಪಗೆ ಇರುವುದರಿಂದ ತಿನ್ನಲು ಹೆಚ್ಚು ರುಚಿಯಾಗಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಇದಕ್ಕೆ ಭಾರೀ ಬೇಡಿಕೆ ಇದೆ. ಬ್ಯಾಡಗಿ ಮೆಣಸು, ಈರುಳ್ಳಿ ಬೆಳೆಯ ಜತೆಗೆ ಅದಕ್ಕಿಂತಲೂ ಜಾಸ್ತಿ ಲಾಭವನ್ನು ದಾಳಿಂಬೆಯಲ್ಲಿ ಪಡೆಯುತ್ತಿದ್ದಾರೆ.