ವಿಜಯಪುರ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶಾಸಕರ ನಿಧಿಯಿಂದ ಮಂಜೂರಿಸಿದ ರೂ.25 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ರೋಗಿಗಳ ನೋಂದಣಿ ಕೊಠಡಿ ಕಾಮಗಾರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು. ನಂತರ ಆಸ್ಪತ್ರೆ ಆವರಣದಲ್ಲಿ ಬಡವರಿಗೆ ಅನುಕೂಲ ಆಗಲೆಂದು ಸಿದ್ದಸಿರಿ ಸೌಹಾರ್ದ ಸಹಕಾರಿ ಮತ್ತು ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ.20 ಲಕ್ಷ ಅನುದಾನದಲ್ಲಿ ಸ್ಥಾಪಿಸಲಾದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಮತ್ತು ರೂ.2 ಲಕ್ಷ ಅನುದಾನದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ಆಕರ್ಷಣಿಯವಾಗಿ ನಿರ್ಮಿಸಲಾದ ಆಟೋ ಸ್ಟ್ಯಾಂಡ್ ಹಾಗೂ ರೋಗಿಗಳು ಮತ್ತು ಅವರೊಂದಿಗೆ ಬಂದವರಿಗೆ ಶುದ್ದ ನೀರು ಸೇವನೆಗಾಗಿ ಕೆಬಿಜೆಎನ್ ಎಲ್ ಯೋಜನೆಯಡಿ ರೂ.9 ಲಕ್ಷ ಅನುದಾನದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಇದೇ ವೇಳೆ ಜಿಲ್ಲಾ ಆಸ್ಪತ್ರೆ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸಂಗನಬಸಪ್ಪ ಸಜ್ಜನ, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಲಕ್ಕಣ್ಣವರ ಸೇರಿದಂತೆ ಮಹಾನಗರ ಪಾಲಿಕೆ ಹಾಲಿ ಮಾಜಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು, ಸಿಬ್ಬಂದಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.