ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ ಎಂದು ಮೊದಲಿನಿಂದಲೇ ಹೇಳಿಕೊಂಡು ಬಂದಿದ್ದೇನೆ. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರ ಹೇಳಿಕೆ ಪುಷ್ಟೀಕರಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 40-45 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಿ.ಎಲ್.ಸಂತೋಷ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ನಾನು ಹೇಳಿದಂತೆ ಏನೋ ಗಡಿಬಡಿ ಇದೆ ಎಂದು, ಆದರೆ ಸದ್ಯ ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನು ಸಹ ಇಲ್ಲ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಅಸಮಾಧಾನವಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅವರಿಗೆ ಸಚಿವರು ಸಹ ಬೆಲೆ ಕೊಡುತ್ತಿಲ್ಲ. ಇನ್ನೂ ಗ್ಯಾರಂಟಿ ಯೋಜನೆಗೆ ಪ್ರತಿ ತಿಂಗಳು 52 ಸಾವಿರ ಕೋಟಿ ರೂ. ವೆಚ್ಚ ಬೇಕಾಗುತ್ತದೆ. ಅದನ್ನು ಭರ್ತಿ ಮಾಡಲು ವಿವಿಧ ರೀತಿಯ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ ವಿದ್ಯುತ್ ದರ ಪ್ರತಿ ಯೂನಿಟಿಗೆ 1 ರೂ. ಏರಿಸಲಾಗಿದೆ ಎಂದರು. ಸದ್ಯ ಪರಿಸ್ಥಿತಿ ನೋಡಿದರೆ ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುವುದು ದೂರದ ಮಾತು, ಇನ್ನೂ ತಮ್ಮ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡುತ್ತಿಲ್ಲ. ಗುತ್ತಿಗೆದಾರರ ಬಿಲ್ ಸಹ ಪಾವತಿ ಮಾಡಿಲ್ಲ. ಇದೇ ವಿಷಯ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಪಕ್ಷ ದೊಡ್ಡ ಪ್ರಚಾರವೇ ಮಾಡಿ, ಶೇ.40ರಷ್ಟು ಕಮೀಷನ್ ಪಡೆದುಕೊಳ್ಳುವ ಸರ್ಕಾರ ಎಂದು ಟೀಕೆ ಮಾಡಿತ್ತು. ಈಗ ಅವರ ಮೇಲೆ ಗುತ್ತಿಗೆದಾರರು ಮುಗಿಬಿದ್ದಿದ್ದಾರೆ ಎಂದರು. ನಾಳೆ ಶ್ರೀಲಂಕಾದಲ್ಲಿ ನಡೆಯಲಿರುವ ಏಷಿಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಗೆಲ್ಲಬೇಕು ಎಂದು ನಾನು ಹಾರೈಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಅಷ್ಟಾಗಿ ನಾನು ಕ್ರಿಕೆಟ್ ಪಂದ್ಯಾವಳಿ ನೋಡುವುದಿಲ್ಲ. ಮನೆಯಲ್ಲಿಯೋ ಕ್ರಿಕೆಟ್ ಪಂದ್ಯ ನೋಡುತ್ತಿದ್ದರೆ, ಚಾನೆಲ್ ಬದಲಿಸುತ್ತೇನೆ ಎಂದ ಅವರು. ಸೂರ್ಯ ಚಂದ್ರ ಇರುವವರೆಗೂ ಇಂಡಿಯಾ ಮ್ಯಾಚ್ ಗೆಲ್ಲುತ್ತದೆ. ಒಬ್ಬ ದೇಶ ಭಕ್ತನಾಗಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.