ವಿಜಯಪುರ: ಜಿಲ್ಲೆಯಲ್ಲಿ ಹೆಲ್ಮೇಟ್ ಕಡ್ಡಾಯಗೊಳಿಸಿರುವುದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಮರ್ಚಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಜಿಲ್ಲೆಯಲ್ಲಿ ಹೆಲ್ಮೇಟ್ ಧರಿಸುವುದಕ್ಕೆ ವಿನಾಯ್ತಿ ನೀಡುವುದು ಅಗತ್ಯವಾಗಿದೆ, ಮಳೆಗಾಲವಿದ್ದರೂ ಸಹ ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಅಧಿಕವಾಗಿರುತ್ತದೆ. ಹೆಲ್ಮೆಟ್ ಧರಿಸುವದರಿಂದ ಅನೇಕ ಚರ್ಮರೋಗಗಳು ತಲೆಯಲ್ಲಿ ಹುಟ್ಟಿಕೊಂಡು ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿ ಸವಾರರರಿಗೆ ಹೆಲ್ಮೆಟ್ ಧರಿಸುವಿಕೆಯಿಂದ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು.